2019 ರ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿಯಿಂದ ಸಿದ್ಧತೆ: ಜೂ.15 ಕ್ಕೆ ಬೈಕ್ ರ್ಯಾಲಿಗೆ ಚಾಲನೆ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಈಗಷ್ಟೇ ಇನ್ನೂ ಇಳಿಯುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ 2019 ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದೆ.
2019 ರ ಲೋಕಸಭಾ ಚುನಾವಣೆಗೆ ಸಮೂಹ ಸಂಪರ್ಕ ಕಾರ್ಯಕ್ರಮಕ್ಕಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಘಟಕ ಜೂ.15 ರಂದು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಕೆಲವು ದಿನಗಳ ಹಿಂದೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸಭೆಯಲ್ಲಿ 2019 ರ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ತಕ್ಷಣದಿಂದಲೇ ಸಕ್ರಿಯರಾಗುವಂತೆ ಯುವ ಮೋರ್ಚಾ ಕಾರ್ಯಕರ್ತರಿಗೆ ಯಡಿಯೂರಪ್ಪ ಕರೆ ನೀಡಿದ್ದಾರೆ.
ಜೂ.15-20 ವರೆಗೆ ಬೈಕ್ ರ್ಯಾಲಿ ನಡೆಯಲಿದ್ದು,ಎಲ್ಲಾ 224 ವಿಧಾನಸಭಾ ಕ್ಷೇತ್ರಗಳನ್ನೂ ತಲುಪುವ ಗುರಿ ಹೊಂದಲಾಗಿದೆ. ಜನ್ ಧನ್, ಮುದ್ರಾ ಯೋಜನೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪರ ಯೋಜನೆಗಳನ್ನು, ಸಾಧನೆಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ತಿಳಿಸುವುದು ರ್ಯಾಲಿಯ ಮುಖ್ಯ ಉದ್ದೇಶವಾಗಿದೆ.