ನಾಳೆಯಿಂದ ‘ನಮ್ಮ ಮೆಟ್ರೋ’ ಸಿಬ್ಬಂದಿ ಮುಷ್ಕರ: ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧ ಎಂದ ಬಿಎಂಆರ್’ಸಿಎಲ್
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್’ಸಿಎಫ್) ನೌಕರರ ಸಂಘ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಿದ್ಧ ಎಂದು ಬಿಎಂಆರ್’ಸಿಎಲ್ ಭಾನುವಾರ ಹೇಳಿದೆ.
ನೌಕರರ ಮುಷ್ಕರ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಎಂಆರ್’ಸಿಎಲ್ ಅಧಿಕಾರಿಗಳು, ಈಗಾಗಲೇ ರಾಜ್ಯ ಗೃಹ ಕಾರ್ಯದರ್ಶಿ ಹಾಗೂ ಡಿಜಿ ಮತ್ತು ಪೊಲೀಸ್ ಆಯುಕ್ತರ ಬಳಿ ಮಾತುಕತೆ ನಡೆಸಲಾಗಿದ್ದು, ಪ್ರಯಾಣಿಕರ ಭದ್ರತೆಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಬಿಎಂಟಿಸಿ ಕೂಡ ಕ್ರಮಗಳನ್ನು ಕೈಗೊಂಡಿದ್ದು, ಹೆಚ್ಚಿನ ಬಸ್ ಗಳ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸೋಮವಾರ ಹಾಗೂ ಮಂಗಳವಾರದವರೆಗೂ ಬೆಳಿಗ್ಗೆ 5 ರಿಂದ ಸಂಜೆ 6ರವರೆಗೂ ತುರ್ತುಪರಿಸ್ಥಿತಿ ಸಮಯವೆಂದು ಘೋಷಣೆ ಮಾಡಲಾಗಿದೆ. ಪ್ರಯಾಣಿಕರಿಗೆ ಯಾವುದೇ ಸಮಸ್ಯೆಗಳಾದಂತೆ ಎಚ್ಚರಿಕೆ ವಹಿಸಲಾಗಿದ್ದು, 200 ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ. ಸಿಬ್ಬಂದಿಗಳ ಕೆಲಸ ಅವಧಿಯನ್ನು ಎರಡು ಪಾಳಿಗೆ ನಿಯೋಜಿಸಲಾಗಿದೆ. ಸಿಬ್ಬಂದಿಗಳ ಕೆಲಸದ ಅವಧಿಯನ್ನು 12 ಗಂಟೆಗೆ ನಿಗದಿಪಡಿಸಲಾಗಿದೆ. ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಹಾಗೂ ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಗೆ ನಿಯೋಜಿಸಲಾಗಿದೆ.
ರೈಲುಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಈಗಾಗಲೇ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲವನ್ನೂ ನಿಭಾಯಿಸಲು ನಮ್ಮಲ್ಲಿ ಸಾಕಷ್ಟು ಸಿಬ್ಬಂದಿಗಳಿದ್ದಾರೆ. ಮೆಟ್ರೋ ಚಾಲನೆಯಲ್ಲಿ ಕೊಂಚ ಏರುಪೇರುಗಳು ಕಂಡು ಬರಬಹುದು. ಆದರೆ, ನಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಪಡುತ್ತಿದ್ದೇವೆ. ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುತ್ತೇವೆಂದು ಬಿಎಂಆರ್’ಸಿಎಲ್ ನಿರ್ವಹಣಾ ನಿರ್ದೇಶಕ ಮಹೇಂದ್ರ ಜೈನ್ ಅವರು ಹೇಳಿದ್ದಾರೆ.
ಬಿಎಂಟಿಸಿ ನಿರ್ದೇಶಕ ವಿ. ಪೊಣ್ಣುರಾತ್ ಅವರು ಮಾತನಾಡಿ, ನಮ್ಮ ಎಲ್ಲಾ ಬಸ್ ಗಳು ಕಾರ್ಯನಿರ್ವಹಿಸುತ್ತಿವೆ. ಬೇಡಿಕೆಗೆ ತಕ್ಕಂತೆ ಎಲ್ಲಾ ಇತರೆ ಪ್ರದೇಶಗಳಿಗೂ ಬಸ್ ಗಳ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.