ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿನ್ನೆ ಸಂಜೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಅನೇಕ ಕಡೆಗಳಲ್ಲಿ ಆಸ್ತಿಪಾಸ್ತಿ ನಷ್ಟ ಉಂಟಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಗೊಂಡಿತ್ತು.
ಮುರ್ನಾಡುವಿನಲ್ಲಿ 20ಕ್ಕೂ ಹೆಚ್ಚು, ನಾಪೋಕ್ಲುವಿನಲ್ಲಿ ಏಳು ವಿದ್ಯುತ್ ಕಂಬಗಳು ನೆಲಕ್ಕುರಳಿ ಬಿದಿದ್ದು, ವಿರಾಜಪೇಟೆ ಹಾಗೂ ಮೂರ್ನಾಡು ನಡುವೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ದೆಚೂರು ಸೇರಿದಂತೆ ಮಡಿಕೇರಿಯ ಅನೇಕ ಕಡೆಗಳಲ್ಲಿ ವಿದ್ಯುತ್ ಇಲ್ಲದೆ ಜನರು ತೊಂದರೆ ಅನುಭವಿಸುವಂತಾಯಿತು.
ಶಾಂತಹಳ್ಳಿ- ಸೋಮವಾರ ಪೇಟೆ ರಸ್ತೆ ಮೇಲೆ 3 ಅಡಿ ನೀರು ನಿಂತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕುಡು ಮಂಗಳೂರಿನಲ್ಲಿ ಬಿರುಗಾಳಿಯಿಂದಾಗಿ ಬಾಳೆ, ಅಡಿಕೆ ಮತ್ತು ತೆಂಗಿನ ಮರಗಳು ಧರೆಗುರುಳಿ ಬಿದಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಹಾವೇರಿ ಜಿಲ್ಲೆಯಲ್ಲೂ ಮುಂಗಾರು ಪೂರ್ವ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ 150. 44 ಮಿಮಿ ಮಳೆಯಾಗಿದೆ. ಈ ವರ್ಷದ ಮೇ 1 ರಿಂದ 25 ರವರೆಗೂ ಜಿಲ್ಲೆಯಲ್ಲಿ 1, 063.6 ಮಿ ಮೀ ಮಳೆ ಸುರಿದಿದೆ. ಇದೇ ಅವಧಿಯಲ್ಲಿನ ಸಾಮಾನ್ಯ ಮಳೆ ಪ್ರಮಾಣ 15. 9 ಆಗಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಬಿರುಗಾಳಿ ಸಹಿತ ಭಾರೀ ಮಳೆ ಯಾಗಲಿದೆ. 29 ರಂದು 115 ಮಿ ಮಿ ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.