EBM News Kannada
Leading News Portal in Kannada

ಭಿನ್ನಮತೀಯರು ಮಾನಸಿಕ ಅಸ್ವಸ್ಥರಾಗಿದ್ದಾರೆ: ಯತ್ನಾಳ್‌ ತಂಡದ ವಿರುದ್ಧ ಎಂ.ಪಿ. ರೇಣುಕಾಚಾರ್ಯ ಆಕ್ರೋಶ

0


ದಾವಣಗೆರೆ: ಭಿನ್ನಮತೀಯರು ದಿಲ್ಲಿ ದಂಡಯಾತ್ರೆ ಮಾಡಿದರೂ ಬಿ.ವೈ.ವಿಜಯೇಂದ್ರ ಏನೆಂಬುದು ರಾಷ್ಟ್ರೀಯ ನಾಯಕರಿಗೂ ಗೊತ್ತಿದೆ. ಹಾದಿಬೀದಿಯಲ್ಲಿ ಮಾತನಾಡುವ ಮೂಲಕ ಭಿನ್ನಮತೀಯರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ ಇತರರನ್ನು ಟೀಕಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಏನೆಂಬುದು ದಿಲ್ಲಿ ನಾಯಕರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಕೆಲಸವನ್ನು ವಿಜಯೇಂದ್ರ ಮಾಡುತ್ತಿದ್ದರೆ, ಭಿನ್ನಮತೀಯರ ಗುಂಪು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವ ಬದಲಿಗೆ ಸ್ವಪಕ್ಷದವರ ವಿರುದ್ಧವೇ ಮಾತನಾಡುತ್ತಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷವಾದರೂ ಇನ್ನೂ ಸರ್ಕಾರ ಟೇಕಾಫ್ ಆಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡದೇ, ಬಿಜೆಪಿಯವರ ವಿರುದ್ಧವೇ ಭಿನ್ನಮತೀಯರು ಮಾತನಾಡುತ್ತಿದ್ದಾರೆ. ಕೇವಲ ನಾಲ್ಕೈದು ಜನ ದಿಲ್ಲಿಗೆ ಓಡಾಡುತ್ತಿದ್ದಾರೆ. ಹಿಂದೆ ಬಿ.ಎಸ್. ಯಡಿಯೂರಪ್ಪನವರಿಗೆ ತೊಂದರೆ ಕೊಟ್ಟಾಗ ಬಿಜೆಪಿಗೆ ಯಾವ ಸ್ಥಿತಿ ಬಂದಿತೆಂಬ ಸಂಗತಿಯನ್ನು ಮರೆಯಬಾರದು ಎಂದು ಅವರು ಹೇಳಿದರು.

ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದೂ ಅಷ್ಟೇ ಸತ್ಯ. ಕಾಂಗ್ರೆಸ್ ಪಕ್ಷದ ವಿರುದ್ಧ ಭಿನ್ನಮತೀಯರ ಪೈಕಿ ಯಾರೂ ಮಾತನಾ ಡುತ್ತಿಲ್ಲ. ನಿಮಗೆ ಮಾನ ಮರ್ಯಾದೆಯೆಂಬುದು ಇದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಿನ್ನಮತೀಯರು ಇಷ್ಟೆಲ್ಲಾ ಮಾತನಾಡುತ್ತಿರುವುದು, ಮಾಡುತ್ತಿರುವುದು ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ. ನಮಗೂ ದಿಲ್ಲಿಗೆ ಹೋಗುವುದು ಗೊತ್ತು. ಸಭೆ ಮಾಡುವುದೂ ನಮಗೆ ಗೊತ್ತು. ಬಿಜೆಪಿಯನ್ನು ಹಾಳು ಮಾಡುವುದಕ್ಕೆ ಭಿನ್ನಮತೀಯರು ಹೀಗೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಭಿನ್ನಮತೀಯರೆಲ್ಲಾ ಚುನಾವಣೆಗೆ ಸ್ಪರ್ಧೆ ಮಾಡಲಿ, ಯಾರ ಯೋಗ್ಯತೆ ಏನೆಂಬುದು ಅವಾಗ ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶ್ರೀರಾಮುಲುಗೆ ಎತ್ತಿ ಕಟ್ಟಲು ಪ್ರಯತ್ನಿಸಿದರಾದರೂ, ರಾಮುಲು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಹೆಸರುಗಳನ್ನು ಸುಮ್ಮನೇ ಎಳೆದು ತರುತ್ತಿದ್ದಾರೆ. ನಾವು ಎಲ್ಲರೂ ಸೇರಿಕೊಂಡು, ದಿಲ್ಲಿಗೆ ಹೋಗುವುದಕ್ಕೆ ಸಿದ್ಧರಿದ್ದೇವೆ. ದಿಲ್ಲಿಗೆ ದಾರಿ ನಮಗೇನು ಗೊತ್ತಿಲ್ಲವೇ? ಇಂತಹ ಭಿನ್ನಮತೀಯರ ತಲೆ ಹರಟೆ ಹೆಚ್ಚಾಗಿದೆ. ಇದರಿಂದ ಪಕ್ಷದ ವರ್ಚಸ್ಸುಸಹ ಕಡಿಮೆಯಾಗುತ್ತಿದೆ ಎಂದು ಅವರು ದೂರಿದರು.

ಬಿಜೆಪಿ ಸಂಘಟನೆಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶ್ರಮಿಸುತ್ತಿದ್ದಾರೆ. ಭಿನ್ನಮತೀಯರ ವಿರುದ್ಧ ಬೆಂಗಳೂರಿನಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಫೆ.5ರಂದು ನಾವೂ ಸಭೆ ಸೇರಲಿದ್ದೇವೆ. ಭಿನ್ನಮತೀಯರ ವಿರುದ್ಧ ಹೇಗೆ ಹೋರಾಟ ಮಾಡಬೇಕೆಂಬ ಬಗ್ಗೆ ಬುಧವಾರದ ಸಭೆಯಲ್ಲಿ ನಾವೆಲ್ಲರೂ ತೀರ್ಮಾನ ಮಾಡುತ್ತೇವೆ. ನಾವೆಲ್ಲಾ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಬೆನ್ನಿಗೆ ನಿಲ್ಲುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಗೊಂದಲ ಹುಟ್ಟು ಹಾಕುತ್ತಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಭಿನ್ನಮತೀಯರ ವಿರುದ್ಧ ಪಕ್ಷದ ರಾಷ್ಟ್ರೀಯ ನಾಯಕರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಭಿನ್ನಮತೀಯರವನ್ನು ಪಕ್ಷದಿಂದ ಉಚ್ಛಾಟಿಸುವಂತೆಯೂ ನಾಳೆ ಬೆಂಗಳೂರಿನ ಸಭೆಯಲ್ಲಿ ನಾವೆಲ್ಲರೂ ಸೇರಿ ಚರ್ಚಿಸಿ, ವರಿಷ್ಟರಿಗೆ ಒತ್ತಾಯಿಸಲಿದ್ದೇವೆ ಎಂದು ಎಂ.ಪಿ.ರೇಣುಕಾಚಾರ್ಯ ಮಾಹಿತಿ ನೀಡಿದರು.

ಪಕ್ಷದ ಯುವ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್‌, ಪಂಜು ಪೈಲ್ವಾನ್ ಇತರರು ಇದ್ದರು.

Leave A Reply

Your email address will not be published.