EBM News Kannada
Leading News Portal in Kannada

ಜಾತಿ ನಿಂದನೆ ಪ್ರಕರಣ: ಬಂಧನ ಭೀತಿಯಲ್ಲಿ ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು

0


ರಾಯಚೂರು: ಜಾತಿ ನಿಂದನೆ, ಹಲ್ಲೆಗೆ ಯತ್ನ, ಜೀವಬೆದರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಕನಕಗಿರಿ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು ಬಂಧನ ಭೀತಿ ಎದುರಿಸುತ್ತಿದ್ದಾರೆ. ಈ ಮಧ್ಯೆ ಬೆಳಗಾವಿಯಲ್ಲಿ ಸಿಂಧನೂರು ಪೊಲೀಸರು ಕಾರ್ಯಾಚರಣೆ ನಡೆಸಿ ದಢೇಸೂಗುರುಗೆ ಸೇರಿದ ಕಾರು ಮತ್ತು ಅವರ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಸಿಂಧನೂರು ತಾಲೂಕಿನ ದಡೇಸ್ಗೂರು ಗ್ರಾಮದಲ್ಲಿ ಡಿ.12ರಂದು ಕನಕಗಿರಿ ಮಾಜಿ ಶಾಸಕ ಬಸವರಾಜ ದಡೇಸ್ಗೂರು ಹಲ್ಲೆ, ಜಮೀನು ಕಬಳಿಕೆ, ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅದೇ ಗ್ರಾಮದ ಆಲಮಪ್ಪ ಎಂಬವರು ಜ.23ರಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಮಧ್ಯೆ ಬಸವರಾಜ ದಡೇಸ್ಗೂರು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅನೇಕ ಸಭೆ-ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಸಾರ್ವಜನಿಕವಾಗಿ ಕಾರ್ಯಕ್ರಮದಲ್ಲಿ ಭಾಗಿಯಾದರೂ ಅವರನ್ನು ಬಂಧಿಸಲು ಮುಂದಾಗಿರಲಿಲ್ಲ. ಈ ನಡುವೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಸ್ಥಳೀಯ ಪೊಲೀಸರ ಮೇಲೆ ಪ್ರಭಾವಿ ಸಚಿವರೊಬ್ಬರ ಒತ್ತಡ ಹಾಕಿದ ಹಿನ್ನಲೆಯಲ್ಲಿ ಬಂಧನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಬಲೆ: ಡಿವೈಎಸ್ಪಿ ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ ಸಿಪಿಐ ವೀರಾರಡ್ಡಿ, ಪಿಎಸ್ಸೈ ಪ್ರಕಾಶ ಡಂಬಳ್ ಸೇರಿದಂತೆ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ಬಸವರಾಜ ದಡೇಸ್ಗೂರು ಬಂಧನಕ್ಕೆ ಬಲೆ ಬೀಸಿದ ಪೊಲೀಸ್ ತಂಡ ಬೆಳಗಾವಿ ಹತ್ತಿರದ ರೆಸಾರ್ಟ್ ವೊಂದರ ಮೇಲೆ ದಾಳಿ ನಡೆಸಿದೆ. ವಿಷಯ ತಿಳಿಯುತ್ತಿದ್ದಂತೆ ದಡೇಸ್ಗೂರು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿದ್ದ ಬಿಜೆಪಿ ಜಿಲ್ಲಾಧ್ಯಕ್ಷರ ವಾಹನ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ನಾನು ಹಾಗೂ ಪಿಎಸ್ಸೈ ನೇತೃತ್ವದ ಪೊಲೀಸ್ ತಂಡವು ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಹತ್ತಿರದ ರೆಸಾರ್ಟ್ ಮೇಲೆ ದಾಳಿ ಮಾಡಿ ಬಸವರಾಜ ದಡೇಸೂಗೂರು ಅವರ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಕಸ್ಟಡಿಗೆ ಪಡೆದಿದ್ದೇವೆ ಎಂದು ಸಿಂಧನೂರು ಸರ್ಕಲ್ ಇನ್ ಸ್ಪೆಕ್ಟರ್ ವೀರಾರೆಡ್ಡಿ ತಿಳಿಸಿದ್ದಾರೆ.

Leave A Reply

Your email address will not be published.