EBM News Kannada
Leading News Portal in Kannada

ಬಿಎಸ್‌ವೈ, ವಿಜಯೇಂದ್ರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ : ಬಿಜೆಪಿ ಸಂಸದ ಸುಧಾಕರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

0


ದಾವಣಗೆರೆ : ಸಂಸದ ಡಾ.ಕೆ.ಸುಧಾಕರ್ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವನು ನಮ್ಮ ಪಕ್ಷಕ್ಕೆ ಐರನ್ ಲೆಗ್ ಇದ್ದಂತೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧಾಕರ್ ಸಚಿವ ಸ್ಥಾನದ ಆಸೆಗೆ ಬಿಜೆಪಿಗೆ ಬಂದಿದ್ದು, ಪಕ್ಷದ ಉದ್ದಾರಕ್ಕೆ ಅಲ್ಲ. ಬಿಜೆಪಿಯಲ್ಲಿ ಎರಡು ಖಾತೆಗೆ ಪಟ್ಟು ಹಿಡಿದು ಮನೆಯಲ್ಲಿ ಕೂತಿದ್ದ ನೀನು ಥರ್ಡ್ ಕ್ಲಾಸ್ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.

ಸಚಿವನಾಗಿದ್ದ ವೇಳೆ ಶಾಸಕರ ಕರೆ ಸ್ವೀಕರಿಸುತ್ತಿರಲಿಲ್ಲ. ನಾನು ಜಗಳ ಮಾಡಿದ ಕಾರಣದಿಂದ ಹೊನ್ನಾಳಿಗೆ 200 ಹಾಸಿಗೆಯ ಆಸ್ಪತ್ರೆ ಕೊಟ್ಟಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಬಜೆಟ್‌ನಲ್ಲಿ ದಾವಣಗೆರೆಗೆ ಜಯದೇವ ಆಸ್ಪತ್ರೆ ಶಾಖೆ ಮಂಜೂರು ಮಾಡಿದ್ದು, ಅದನ್ನು ರದ್ದು ಮಾಡಿದ್ದು ಇದೇ ಸುಧಾಕರ್. ಸಚಿವರಾಗಿದ್ದ ವೇಳೆ ಮಾಡಬಾರದ ಕೆಲಸ ಮಾಡಿರುವ ನಿನ್ನ ಬಂಡವಾಳ ಬಯಲು ಮಾಡುವೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಈ ಸುಧಾಕರ್‌ನಂತಹ ವ್ಯಕ್ತಿಯಿಂದಲೇ ನಾವು ಸೋತಿದ್ದು. ಇವರು ನಡೆದುಕೊಂಡ ರೀತಿಯಿಂದ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದೆ ಎಂದ ರೇಣುಕಾಚಾರ್ಯ, ವಿಜಯೇಂದ್ರ ಬಗ್ಗೆ ಮಾತಾಡಿದರೆ ಹುಷಾರ್ ಎಂದು ಎಚ್ಚರಿಸಿದರು.

ಯತ್ನಾಳ್ ಹೋರಾಟ ಕಾಂಗ್ರೆಸ್ ವಿರುದ್ಧ ಇರಬೇಕು. ಆದರೆ, ವಿಜಯೇಂದ್ರ ವಿರುದ್ಧ ಮಾಡುತ್ತಿದ್ದಾರೆ. ತಾಕತ್ತಿದ್ದರೆ ಕನಕಪುರ, ವರುಣಾದಲ್ಲಿ ಪಾದಯಾತ್ರೆ ಮಾಡಲಿ. ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ವಾಗ್ದಾಳಿ ಸರಿಯಲ್ಲ. ಯತ್ನಾಳ್ ಸೇರಿದಂತೆ ಕೆಲವರು ವಾಗ್ದಾಳಿ ನಡೆಸುತ್ತಿದ್ದು, ಅವರು ಆಕಾಶಕ್ಕೆ ಉಗುಳುವ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಉಗುಳು ಬೀಳುತ್ತದೆಯೇ ವಿನಃ ಆಕಾಶಕ್ಕೆ ಏನೂ ಆಗುವುದಿಲ್ಲ. ಯತ್ನಾಳ್ ಅವರೇ ಜೆಡಿಎಸ್‌ಗೆ ಏಕೆ ಹೋಗೀದ್ದಿರಿ? ಟಿಪ್ಪು ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದೇ ಮಾಡಿದ್ದು. ಇಫ್ತಾರ್ ಕೂಟಕ್ಕೆ ಏಕೆ ಹೋಗಿದ್ದೀರಿ? ಎಲ್ಲರಿಗೂ ಬಿರಿಯಾನಿ ತಿನ್ನಿಸಿದ್ದ ಯತ್ನಾಳ್ ಹಿಂದೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave A Reply

Your email address will not be published.