ಗುಜರಾತ್ | ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದವರಿಗೆ ಟ್ರಕ್ ಡಿಕ್ಕಿ ; ಮೂಸಾ ಶರೀಫ್, ಲಿಂಗೇಗೌಡ ಮೃತ್ಯು
ಮಂಗಳೂರು : ಅತ್ಯಾಚಾರಿಗಳಿಗೆ ತಕ್ಷಣವೇ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ ಐವರು ವಿರಾಮದ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಓಮ್ನಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಗುಜರಾತ್ ನ ಸೂರತ್ ನಿಂದ 200 ಕಿ.ಮಿ. ದೂರದಲ್ಲಿ ಬುಧವಾರ ಮಧ್ಯಾಹ್ನ 2 ರ ಸುಮಾರಿಗೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರ ಪೈಕಿ ಒಬ್ಬರನ್ನು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್ ಎಂದು ಗುರುತಿಸಲಾಗಿದೆ. ಇನ್ನೊಬ್ಬರು ಲಿಂಗೇಗೌಡ ಎನ್ನಲಾಗಿದೆ. ದಾರಿ ಮಧ್ಯೆ ರಸ್ತೆ ಬದಿ ಕಾರಿನಲ್ಲಿದ್ದಾಗ ಟ್ರಕ್ ಢಿಕ್ಕಿ ಹೊಡೆದು, ಮೂಸಾ ಶರೀಫ್, ಲಿಂಗೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದು ಟ್ರಕ್ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಕೆ ಆರ್ ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಹೋರಾಟಗಾರ ಮೂಸಾ ಶರೀಫ್ ಕರ್ನಾಟಕ ಸಾರಥಿಗಳ ಟ್ರೇಡ್ ಯೂನಿಯನ್ ಮುಖಂಡರು. ದೇಶದಲ್ಲಿ ನಡೆಯುತ್ತಿರುವ ʼಬೇಟಿ ಬಚಾವೋ ಬೇಟಿ ಪಡಾವೋʼ ಅಭಿಯಾನದ ಮಧ್ಯೆ ಕಳವಳಕಾರಿಯಾಗಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಐವರು ಕಾಲ್ನಡಿಗೆ ಜಾಥಾ ಹೊರಟಿದ್ದರು.
ಮೂಸಾ ಶರೀಫ್ ಅವರ ಜೊತೆ ನೌಫಲ್ ಅಬ್ಬಾಸ್, ಹಂಝ ಮತ್ತು ಪ್ರವೀಣ್, ಲಿಂಗೇಗೌಡ ಅವರಿದ್ದರು ಎಂದು ತಿಳಿದು ಬಂದಿದೆ. ಮೂಸಾ ಶರೀಫ್ ಅವರು ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳು, ಕುಟುಂಬದವರನ್ನು ಅಗಲಿದ್ದಾರೆ.
ಪಾದಯಾತ್ರೆಯ ಕುರಿತು ಯೂಟ್ಯೂಬ್ ನಲ್ಲಿ ತಂಡವು ವೀಡಿಯೋ ಹಂಚಿಕೊಳ್ಳುತ್ತಿತ್ತು. ಬುಧವಾರ ಮಧ್ಯಾಹ್ನ ಕಾಲ್ನಡಿಗೆ ಜಾಥಾದ 55ನೇ ದಿನ ಎಂಬ ಶೀರ್ಷಿಕೆಯಲ್ಲಿ ಕೊನೆಯ ವೀಡಿಯೋ ಹಂಚಿಕೆಯಾಗಿದೆ.
Photo : youtube screengrab