EBM News Kannada
Leading News Portal in Kannada

ಹಾಸನ | ಅಪಘಾತದಲ್ಲಿ ಮೃತಪಟ್ಟ ಐಪಿಎಸ್ ಅಧಿಕಾರಿ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು!

0


ಸಿಂಗ್ರೌಲಿ (ಮಧ್ಯಪ್ರದೇಶ): ತಮ್ಮ ಪ್ರಥಮ ಹುದ್ದೆಯ ಅಧಿಕಾರ ಗ್ರಹಣ ಮಾಡಲು ಕಾರಿನಲ್ಲಿ ತೆರಳುವಾಗ ಕರ್ನಾಟಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಪಿಎಸ್ ಅಧಿಕಾರಿ ಹರ್ಷ್ ಬರ್ಧನ್, ತಮ್ಮ ಪ್ರಥಮ ಪ್ರಯತ್ನದಲ್ಲೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು ಎಂದು ಸೋಮವಾರ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

26 ವರ್ಷದ ಮೃತ ಹರ್ಷ್ ಬರ್ಧನ್ ಅವರ ಅಂತ್ಯಕ್ರಿಯೆಯನ್ನು ಬಿಹಾರದಲ್ಲಿ ನಡೆಸಲಾಗುವುದು ಎಂದು ಮಧ್ಯಪ್ರದೇಶದಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರ ತಂದೆ ಅಖಿಲೇಶ್ ಸಿಂಗ್ ತಿಳಿಸಿದ್ದಾರೆ.

ರವಿವಾರ ಸಂಜೆ ಈ ಅಪಘಾತ ನಡೆದಿದ್ದು, ಹರ್ಷ ಬರ್ಧನ್ ರನ್ನು ಕರೆದೊಯ್ಯುತ್ತಿದ್ದ ಕಾರಿನ ಟೈರ್ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಸ್ಫೋಟಗೊಂಡಿದ್ದರಿಂದ, ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನವು ಮನೆ ಹಾಗೂ ಮರವೊಂದಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹರ್ಷ್ ಬರ್ಧನ್, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

2023ನೇ ಬ್ಯಾಚಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಹರ್ಷ್ ಬರ್ಧನ್, ಮಧ್ಯಪ್ರದೇಶದ ನಿವಾಸಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಹರ್ಷ್ ಬರ್ಧನ್, ಇತ್ತೀಚೆಗಷ್ಟೆ ಮೈಸೂರಿನಲ್ಲಿರುವ ಪೊಲೀಸ್ ಅಕಾಡೆಮಿಯಲ್ಲಿ ನಾಲ್ಕು ವಾರಗಳ ತರಬೇತಿಯನ್ನು ಪೂರ್ಣಗೊಳಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕ ಪೊಲೀಸರ ಪ್ರಕಾರ, ಹೊಳೆನರಸೀಪುರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಹರ್ಷ್ ಬರ್ಧನ್ ಹಾಸನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಹರ್ಷ್ ಬರ್ಧನ್ ಸಾವಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸಂತಾಪ ವ್ಯಕ್ತಪಡಿಸಿದ್ದಾರೆ.



Leave A Reply

Your email address will not be published.