ಬೆಂಗಳೂರು: ‘ಫೆಂಗಲ್’ ಚಂಡಮಾರುತದ ಪ್ರಭಾವದಿಂದಾಗಿ ಬೆಂಗಳೂರು ಹಾಗೂ ಕರ್ನಾಟಕದ ಇತರ ಹಲವು ಭಾಗಗಳಲ್ಲಿ ಮುಂದಿನ ಎರಡು ದಿನ ಕಾಲ ನಿರಂತರ ಮಳೆ ಸುರಿಯಲಿದೆ.
ಚಂಡಮಾರುತದ ಪ್ರಭಾವದಿಂದ ರವಿವಾರ ಸಂಜೆಯಿಂದ ನಿರಂತರ ಮಳೆಯಾಗುತ್ತಿದೆ. ಸೋಮವಾರವೂ ಮುಂದುವರಿದಿದೆ. ಚಂಡಮಾರುತದ ತೀವ್ರತೆ ಬುಧವಾರದಿಂದ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಹಾಸನ, ಮಂಡ್ಯ, ರಾಮನಗರದಂತಹ ಜಿಲ್ಲೆಗಳಲ್ಲಿ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ಚಿಕ್ಕಮಗಳೂರು, ಚಿಕ್ಕಾಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಐಎಂಡಿ ಬೆಂಗಳೂರಿನ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿದ್ದಾರೆ.
ಡಿಸೆಂಬರ್ 3ರಂದು ದಕ್ಷಿಣ ಕರ್ನಾಟಕದ ಕರಾವಳಿಯಲ್ಲಿ 35ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಈ ಪ್ರದೇಶಗಳಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಐಎಂಡಿ ಮುನ್ನೆಚ್ಚರಿಕೆ ನೀಡಿದೆ.
ಡಿಸೆಂಬರ್ 3ರಂದು ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಕೊಡಗು, ರಾಮನಗರ ಹಾಗೂ ಚಾಮರಾಜನಗರದ ಅಲ್ಲಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ತುಮಕೂರು ಹಾಗೂ ಇತರ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಹೆಚ್ಚಿನ ಭಾಗಗಳಲ್ಲಿ ಸಾದಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಆರೆಂಜ್ ಅಲರ್ಟ್ ಹಾಗೂ ಯೆಲ್ಲೂ ಅಲರ್ಟ್ ಘೋಷಿಸಲಾದ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆ ವಹಿಸುವಂತೆ ಐಎಂಡಿ ಮುನ್ನೆಚ್ಚರಿಕೆ ನೀಡಿದೆ.