ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಒಕ್ಕಲಿಗ ಸಮುದಾಯದ ಸಚಿವ, ಶಾಸಕರಿಂದ ಮನವಿ
ಬೆಂಗಳೂರು: ಒಕ್ಕಲಿಗ ಹಾಗೂ ದಲಿತರಿಗೆ ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಪಕ್ಷದಲ್ಲಿನ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಸೋಮವಾರ ಮುಖ್ಯಮಂತ್ರಿಯ ಸರಕಾರಿ ನಿವಾಸ ಕಾವೇರಿಯಲ್ಲಿ ಭೇಟಿಯಾದ ನಿಯೋಗದಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ, ಡಾ.ಎಂ.ಸಿ.ಸುಧಾಖರ್, ಶಾಸಕರಾದ ಶರತ್ ಬಚ್ಚೇಗೌಡ, ಬಾಲಕೃಷ್ಣ, ನಂಜೇಗೌಡ, ಡಾ.ರಂಗನಾಥ್ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಮುನಿರತ್ನ ಕಾನೂನು ವ್ಯಾಪ್ತಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೆ ಕಾರಣಕ್ಕೂ ಅದಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾದ ತನಿಖಾ ತಂಡ ರಚಿಸಿ, ತನಿಖೆ ಮಾಡಿಸುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಎಸ್‍ಐಟಿ ಅಥವಾ ಲೋಕಾಯುಕ್ತದಿಂದ ತನಿಖೆ ಮಾಡಿಸಲು ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಜಾತಿ ನಿಂದನೆ ಮಾಡಿರುವ ಮುನಿರತ್ನ ಶಾಸಕನಾಗಿರಲು ಅನರ್ಹ. ಚುನಾವಣೆಗೆ ನಿಲ್ಲಲು ಬೇಕಾದ ಕನಿಷ್ಠ ಅರ್ಹತೆಯು ಅವರಲ್ಲಿಲ್ಲ ಎಂದು ಚಲುವರಾಯಸ್ವಾಮಿ ಕಿಡಿಗಾರಿದರು.
ಮುನಿರತ್ನ ವಿರುದ್ಧ ಮಹಿಳೆಯ ಸೀರೆ ಎಳೆದ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ಮುನಿರತ್ನ ವಿರುದ್ಧ ಬಿಜೆಪಿ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಮುನಿರತ್ನ ಪರವಾಗಿ ಮಾತನಾಡಿರುವ ಕುಮಾರಸ್ವಾಮಿ, ಆರ್.ಅಶೋಕ್ ಹಾಗೂ ಸಿ.ಟಿ.ರವಿ ವಿಷಾದ ವ್ಯಕ್ತಪಡಿಸಬೇಕು ಎಂದು ಅವರು ಆಗ್ರಹಿಸಿದರು.
ನಾಗಮಂಗಲದಲ್ಲಿ ಹಿಂದೂ ಹಾಗೂ ಮುಸ್ಲಿಮರು ಒಂದಾಗಿ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಈ ಪ್ರಕರಣ ಇಷ್ಟು ಬೇಗ ಮುಗಿದು ಹೋಗಿರುವುದಕ್ಕೆ ಬಿಜೆಪಿಯವರಿಗೆ ಬೇಸರ ಅಗಿದೆ. ಪರಿಸ್ಥಿತಿ ಎಲ್ಲವೂ ಸಹಜವಾಗುತ್ತಿರುವುದಕ್ಕೆ ಬಿಜೆಪಿಯವರು ಸಂತಸ ಪಡುವುದು ಬಿಟ್ಟು, ಸತ್ಯ ಶೋಧನೆಗೆ ಸಮಿತಿ ಕಳುಹಿಸಿದ್ದಾರೆ ಎಂದು ಚಲುವರಾಯಸ್ವಾಮಿ ಟೀಕಿಸಿದರು.