EBM News Kannada
Leading News Portal in Kannada

ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ.ವಿಜಯೇಂದ್ರನನ್ನು ನಾನು ಎಂದೂ ಒಪ್ಪುವುದಿಲ್ಲ: ರಮೇಶ್ ಜಾರಕಿಹೊಳಿ

0


ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ.ವಿಜಯೇಂದ್ರ ಅವರನ್ನು ನಾನು ಎಂದೂ ಒಪ್ಪುವುದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂದು ಪಕ್ಷದ ವರಿಷ್ಠರು ಕೂಡಲೇ ನಿರ್ಧರಿಸಬೇಕು ಎಂದು ಗೋಕಾಕ್ ಕ್ಷೇತ್ರದ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಸೋಮವಾರ ಜಿಲ್ಲೆ ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ವಿಜಯೇಂದ್ರ ಪಕ್ಷದಲ್ಲಿ ಇನ್ನೂ ಜೂನಿಯರ್. ಅವನಿಗೆ ಏನೂ ಸಿದ್ಧಾಂತ ಇಲ್ಲ. ಭ್ರಷ್ಟ ಎಂಬ ಲೇಬಲ್ ಆತನ ಮೇಲಿದೆ. ಆತನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಕ್ಕೆ ನನಗೆ ವಿರೋಧವಿದೆ. ಹಾಗಂತ ನಾನೆಂದೂ ಯಡಿಯೂರಪ್ಪನವರಿಗೆ ವಿರೋಧಿ ಅಲ್ಲ. ಬಿಎಸ್‍ವೈ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ’ ಎಂದು ನುಡಿದರು.

ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ. ಆರೆಸೆಸ್ಸ್ ಪ್ರಮುಖ ನಾಯಕರ ಸಭೆಯಲ್ಲಿ ಏನು ಚರ್ಚೆಯಾಯಿತು ಎಂದು ಹೇಳುವುದಕ್ಕೆ ಆಗುವುದಿಲ್ಲ. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ ಅಷ್ಟೇ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಸಲಿ ಎಂದು ಬಿಜೆಪಿ, ಆರೆಸೆಸ್ಸ್ ಪ್ರಮುಖರ ಸಭೆಯಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

120ರಿಂದ 130 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಶಕ್ತಿ ನಮ್ಮಲ್ಲಿದೆ. ವರಿಷ್ಠರು ನೀಡಿದ ಟಾಸ್ಕ್ ಪೂರ್ಣಗೊಳಿಸುವಲ್ಲಿ ನಾನು ವಿಫಲನಾದರೆ ನನ್ನನ್ನು ಒದ್ದು ಹೊರಹಾಕಿ ಎಂದು ಸಂಘ ಪರಿವಾರದ ಪ್ರಮುಖರ ಸಭೆಯಲ್ಲಿ ಹೇಳಿದ್ದೇನೆ. ಹಿರಿಯ ಮುಖಂಡ ಅನಂತ್ ಕುಮಾರ್ ತೀರಿಕೊಂಡ ಮೇಲೆ ಬಿಜೆಪಿಯಲ್ಲಿ ಯಾರೂ ಪ್ರಬಲ ನಾಯಕನಾಗಿಲ್ಲ. ಬಿಜೆಪಿ ಎಂಬುದು ಒಬ್ಬರ ಕೈಯಲ್ಲಿ ಆಡಳಿತ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಆಗ್ರಹಿಸಿದ್ದೇವೆ ಎಂದರು.

ಬಿಎಸ್‍ವೈಗೆ ವಿಶ್ರಾಂತಿ ಅಗತ್ಯ: ಯಡಿಯೂರಪ್ಪರ ಬಗ್ಗೆ ನಮಗೆ ಗೌರವವಿದೆ. ಅವರಿಗೆ ವಯಸ್ಸಾಗಿದ್ದು, ವಿಶ್ರಾಂತಿಯ ಅಗತ್ಯವಿದೆ. ನಮಗೆ ಯಡಿಯೂರಪ್ಪನವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ. ಪಕ್ಷದಲ್ಲಿ 15ರಿಂದ 20 ಮಂದಿಗೆ ಸಾಮೂಹಿಕ ನಾಯಕತ್ವ ನೀಡಬೇಕು ಎಂದು ಅವರು ಕೋರಿದರು.

ಮುನಿರತ್ನ ಬಂಧನಕ್ಕೆ ವಿರೋಧ: ಶಾಸಕ ಮುನಿರತ್ನ ನಿಂದನೆ ಮಾಡಿದ್ದೂ ಇನ್ನೂ ಸಾಬೀತಾಗಿಲ್ಲ. ಎಫ್‍ಎಸ್‍ಎಲ್ ವರದಿ ಬರುವ ಮೊದಲೇ ಅವರನ್ನು ಬಂಧಿಸಿದ್ದು ಸರಿಯಲ್ಲ. ಮುನಿರತ್ನ ಅವರಿಗೆ ನೋಟಿಸ್ ನೀಡಿ ಪಕ್ಷ ತಪ್ಪು ಮಾಡಿದೆ. ಮುನಿರತ್ನ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಎಂದು ಅವರು ದೂರಿದರು.

Leave A Reply

Your email address will not be published.