EBM News Kannada
Leading News Portal in Kannada

‘ಮುಡಾ ಹಗರಣʼ ಸಂಬಂಧ ಸಿಎಂ ರಾಜೀನಾಮೆ ಅನಿವಾರ್ಯ : ವಿಜಯೇಂದ್ರ | Muda scam

0


ಬೆಂಗಳೂರು : ಅಧಿಕಾರಿ ಅಮಾನತಿನ ಮೂಲಕ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರಕಾರವು ಮೊದಲ ಬಾರಿಗೆ ಮುಡಾ ಹಗರಣ ನಡೆದುದನ್ನು ಒಪ್ಪಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮುಡಾ’ ಹಗರಣ ಸಂಬಂಧ ರಾಜೀನಾಮೆ ಕೊಡಲೇಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನುಡಿದಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಉಪ್ಪು ತಿಂದವರು ನೀರು ಕುಡಿಯಲೇ ಬೇಕಾಗುತ್ತದೆ. ವಾಲ್ಮೀಕಿ ನಿಗಮದ ಹಗರಣ ಆದಾಗ ಮತ್ತು ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಾಗ ಮುಖ್ಯಮಂತ್ರಿ ಸರಕಾರದಲ್ಲಿ ಯಾವುದೇ ಹಗರಣ ಆಗಿಲ್ಲ ಎಂದಿದ್ದರು.

ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ನಿಗಮದಲ್ಲಿ 87ಕೋಟಿ ರೂ.ಹಗರಣ ಆದುದನ್ನು ಸದನದಲ್ಲಿ ಒಪ್ಪಿಕೊಂಡಿದ್ದರು. ಮುಡಾದಲ್ಲಿ ಹಗರಣ ಆಗಿಲ್ಲ, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆಂದು ತದನಂತರ ಆರೋಪಿಸಿದ್ದರು. ಈಗ ಪ್ರಕರಣ ಕೋರ್ಟಿನಲ್ಲಿದ್ದು, ಮುಡಾದ ಹಿಂದಿನ ಕಮೀಷನರ್ ಅನ್ನು ಅಮಾನತು ಮಾಡಿದ್ದಾರೆ ಎಂದು ತಿಳಿಸಿದರು.

ಛಲವಾದಿ ನಾರಾಯಣಸ್ವಾಮಿ ವಿರುದ್ಧ ದೂರು ನೀಡಲು ರಾಜಭವನಕ್ಕೆ ತೆರಳಿದ ನಿಯೋಗದಲ್ಲಿ ಯಾಕೆ ಡಿ.ಕೆ.ಶಿವಕುಮಾರ್ ಇರಲಿಲ್ಲ? ಯಾಕೆ ಸಿಎಂ ಹೋಗಲಿಲ್ಲ? ಯಾಕೆ ನಿಮ್ಮ ಸರಕಾರದ ಇತರ ಹಿರಿಯ ಸಚಿವರು ನಿಮ್ಮದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಪರವಾಗಿ ಕಾಂಗ್ರೆಸ್ ಪಕ್ಷದ ಯಾವುದೇ ಹಿರಿಯ ನಾಯಕರು ರಾಜಭವನದಲ್ಲಿ ಕಾಣಲಿಲ್ಲ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆಯವರು ಉತ್ತರಿಸಲಿ ಎಂದು ವಿಜಯೇಂದ್ರ ಆಗ್ರಹಿಸಿದರು.

ಛಲವಾದಿ ನಾರಾಯಣಸ್ವಾಮಿಯವರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಹಗರಣಗಳಲ್ಲಿ ಮುಳುಗಿದ ಕಾಂಗ್ರೆಸ್ ಪಕ್ಷ ಮತ್ತು ಸರಕಾರವು ತನ್ನನ್ನು ತಾನು ಕಾಪಾಡಲು ಮತ್ತು ಭ್ರಷ್ಟಾಚಾರದಿಂದ ನುಣುಚಿಕೊಳ್ಳಲು ಬಿಜೆಪಿ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದೆ. ಬಿಜೆಪಿ ಮುಖಂಡರ ವಿರುದ್ಧ ಕೇಸುಗಳನ್ನು ದಾಖಲಿಸುವ ಪ್ರಯತ್ನದಲ್ಲಿದ್ದಾರೆ. ಇದ್ಯಾವುದಕ್ಕೂ ನಾವು ಅಂಜುವುದಿಲ್ಲ ಎಂದು ಅವರು ತಿಳಿಸಿದರು.

ನಾನು ರಾಷ್ಟ್ರೀಯ ಅಧ್ಯಕ್ಷರು, ಅಮಿತ್ ಶಾ ಭೇಟಿ ಮಾಡಿದಾಗ ಚನ್ನಪಟ್ಟಣ ಮತ್ತಿತರ ಕ್ಷೇತ್ರಗಳ ಉಪ ಚುನಾವಣೆ ಸಂಬಂಧ ಚರ್ಚೆ ಮಾಡಿದ್ದೇನೆ. ಯೋಗೇಶ್ವರ್ ಚನ್ನಪಟ್ಟಣ ಅಭ್ಯರ್ಥಿ ಆಗುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಸಂಡೂರು, ಶಿಗ್ಗಾವಿಯಲ್ಲಿ ಅನೇಕ ಆಕಾಂಕ್ಷಿಗಳಿದ್ದಾರೆ. ನಾವು ರಾಜ್ಯಮಟ್ಟದಲ್ಲಿ ಚರ್ಚೆ ಮಾಡಿ, ಅಭ್ಯರ್ಥಿಗಳ ಹೆಸರನ್ನು ದಿಲ್ಲಿಗೆ ಕಳಿಸಿಕೊಡುತ್ತೇವೆ ಎಂದು ಹೇಳಿದರು.

ಹೈಕೋರ್ಟ್ ತೀರ್ಪು ಬರಲಿ, ಯಾರ ಮನೆಯಲ್ಲಿ ಎಷ್ಟು ಬಾಗಿಲುಗಳಿವೆ. ಎಷ್ಟು ಬಾಗಿಲು ಕಿತ್ತುಕೊಂಡು ಹೋಗಿದ್ದಾರೆ. ಹೈಕೋರ್ಟ್ ತೀರ್ಪು ಬಂದಾಗ ಇವೆಲ್ಲ ಗೊತ್ತಾಗಲಿದೆ ಎಂದ ವಿಜಯೇಂದ್ರ, ಕೆಪಿಎಸ್ಸಿ ಮರು ಪರೀಕ್ಷೆ ವಿಚಾರದಲ್ಲಿ ಇಂತಹ ಬೇಜವಾಬ್ದಾರಿ ಅಧಿಕಾರಿಯನ್ನು ಯಾಕೆ ಅಲ್ಲಿ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

Leave A Reply

Your email address will not be published.