EBM News Kannada
Leading News Portal in Kannada

ಗ್ರಾ.ಪಂ.ಕಾರ್ಯದರ್ಶಿಗಳು ಜನನ, ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯ : ಸುತ್ತೋಲೆ

0


ಬೆಂಗಳೂರು : ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಜನನ, ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುವಂತೆ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿ ಹಾಗೂ ಅಪರ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಪ್ರಸಕ್ತ ಸಾಲಿನ ಜು.1ರಿಂದ ಜಾರಿಗೆ ಬರುವಂತೆ ಗ್ರಾಮೀಣ ಪ್ರದೇಶಕ್ಕೆ ಅನ್ವಯವಾಗುವಂತೆ ಸರಕಾರದ ಈ ಆದೇಶವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಈ ಕೆಳಕಂಡ ಅಂಶಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಿಸುವ ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳೊಳಗೆ ಜನನ, ಮರಣ ಉಪ ನೋಂದಣಾಧಿಕಾರಿಗಳಾದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ನಿಯಮಾನುಸಾರ ನೋಂದಣಿ ಮಾಡಬೇಕು. ಘಟನೆ ಸಂಭವಿಸಿದ 21 ದಿನಗಳೊಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರವನ್ನು ವಿತರಿಸಬೇಕು.

21 ದಿನಗಳ ತರುವಾಯ ಮತ್ತು 30 ದಿನಗಳೊಳಗಾಗಿ ವರದಿಯಾಗುವ ಘಟನೆಗಳನ್ನು 2 ರೂ.ಶುಲ್ಕ ಪಡೆದು ನೋಂದಾಯಿಸಬೇಕು. 30 ದಿನಗಳ ತರುವಾಯ ವರದಿಯಾಗುವ ಘಟನೆಗಳನ್ನು ನೋಂದಣಿ ಮಾಡುವಂತಿಲ್ಲ. ಆ ಘಟನೆಗಳ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಹಾಗೂ ಅರ್ಜಿದಾರರಿಗೆ ಮಾಹಿತಿ ನೀಡಬೇಕು.

30 ದಿನಗಳ ನಂತರ ವರದಿಯಾಗುವ ಘಟನೆಗಳನ್ನು ಗ್ರಾಮ ಆಡಳಿತ ಅಧಿಕಾರಿಗಳು ಈ ಕೆಳಕಂಡಂತೆ ನೋಂದಣಿ ಮಾಡಬೇಕು. 30 ದಿನಗಳ ತರುವಾಯ ಒಂದು ವರ್ಷದ ಒಳಗೆ ವರದಿಯಾಗುವ ಜನನ, ಮರಣ ಹಾಗೂ ನಿರ್ಜೀವ ಜನನಗಳನ್ನು ತಹಶೀಲ್ದಾರರ ಲಿಖಿತ ಅನುಮತಿಯೊಂದಿಗೆ 5 ರೂ.ತಡೆ ಶುಲ್ಕ ಪಡೆದು ನೋಂದಾಯಿಸಬೇಕು.

ಒಂದು ವರ್ಷದ ನಂತರ ವರದಿಯಾಗುವ ಜನನ, ಮರಣ ಘಟನೆಗಳಿಗೆ ವಿಳಂಬ ನೋಂದಣಿ ಮಾಡಲು ಮೊದಲನೆ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿಯ ಆದೇಶದೊಂದಿಗೆ 10 ರೂ.ತಡೆ ಶುಲ್ಕ ಪಡೆದು ನೋಂದಾಯಿಸಬೇಕು. ಜನನ, ಮರಣ ನೋಂದಣಿ ಸಂಬಂಧ ಯಾವುದಾದರೂ ಸಂದೇಹ, ಸ್ಪಷ್ಟೀಕರಣ ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಹಾಗೂ ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕು.

ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಮಾಡುವ ಸಂದರ್ಭದಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡು ಬಂದಲ್ಲಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ಅಥವಾ ಇ-ಜನ್ಮ ಸಹಾಯವಾಣಿ ಹಾಗೂ ಇ-ಮೇಲ್ crbdkar@gmail.com crbdkar@gmail.com/ ejanmahelpdesk@gmail.com ಮತ್ತು ದೂರವಾಣಿ ಸಂಖ್ಯೆ 1800-425-6578ಕ್ಕೆ ಸಂಪರ್ಕಿಸುವುದು ಎಂದು ತಿಳಿಸಲಾಗಿದೆ.

Leave A Reply

Your email address will not be published.