EBM News Kannada
Leading News Portal in Kannada

ತೆರಿಗೆ ಸಂಗ್ರಹದಲ್ಲಿ ಕಾರ್ಯಕ್ಷಮತೆಯೇ ಮಾನದಂಡ, ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ: ಸಿದ್ದರಾಮಯ್ಯ

0


ಬೆಂಗಳೂರು ಜೂ 11: ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ನಾನು ಪರಿಗಣಿಸುತ್ತೇನೆ. ಬೇರೆ ಯಾವ ಪ್ರಭಾವಕ್ಕೂ ನಾನು ಮಣೆ ಹಾಕಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ವೇಳೆ ಈ ಹೇಳಿಕೆ ನೀಡಿದರು.

ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಅಂದಾಜು, ಜಾರಿ, ಮೇಲ್ಮನವಿ ತಂಡಗಳು ನಿರಂತರ ಸಹಕಾರದಿಂದ ಕೆಲಸ ಮಾಡಿ. ಮೇಲ್ಮನವಿ ಪ್ರಕರಣಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕು. ವಿಳಂಬ ಮಾಡಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. IGST ನಕಾರಾತ್ಮಕ ಸೆಟಲ್ ಮೆಂಟ್ ಆಗುವ ಕಡೆ ಇತರೆ ಸರಕುಗಳ ಮೇಲಿನ ತೆರಿಗೆ ಸಂಗ್ರಹವನ್ನು ಚುರುಕಗೊಳಿಸಬೇಕು ಎಂದು ಸೂಚನೆ ನೀಡಿದರು.

ವೃತ್ತಿ ತೆರಿಗೆ ಸಂಗ್ರಹವನ್ನೂ ಚುರುಕುಗೊಳಿಸಲು ಗುರಿ ನಿಗದಿಪಡಿಸಲು ಸೂಚನೆ ನೀಡಿದ ಸಿಎಂ ಅವರು, ಅಂದಾಜು, ಜಾರಿ, ಮೇಲ್ಮನವಿ ಸಮನ್ವಯ ಸಭೆ ತಿಂಗಳಿಗೆ 2 ಬಾರಿ ಕಡ್ಡಾಯವಾಗಿ ನಡೆಸಬೇಕು. ಕಾರ್ಯ ತಂತ್ರಗಳನ್ನು ಸಿದ್ದಪಡಿಸಬೇಕು. ಮೇಲ್ಮನವಿಗಳನ್ನು ಸಕಾಲದಲ್ಲಿ ಇತ್ಯರ್ಥ ಮಾಡಬೇಕು ಎಂದರು.

ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಆ ವೇಳೆಗೆ ಗುರಿ ತಲುಪಿರಬೇಕು. ಕೆಲಸ ಮರು ಹಂಚಿಕೆ 2017 ಕ್ಕೂ ಹಿಂದಿನ ಪ್ರಕರಣಗಳ ತೀರ್ಮಾನವಾಗಿರುವುದರಿಂದ ಬೆಂಗಳೂರಿನಲ್ಲಿ ಹೆಚ್ಚು ಮೇಲ್ಮನವಿಗಳು ದಾಖಲಾಗುತ್ತಿದ್ದು, ಇವುಗಳ ವಿಲೇವಾರಿಗಾಗಿ ಹೆಚ್ಚುವರಿ ಜಂಟಿ ಆಯುಕ್ತರ ಹುದ್ದೆ ಮಂಜೂರಾಗಿದ್ದು ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ಸಿ.ಶಿಖಾ ಉಪಸ್ಥಿತರಿದ್ದರು

Leave A Reply

Your email address will not be published.