ನೀತಿ ಸಂಹಿತೆ ಉಲ್ಲಂಘನೆ ಆರೋಪ | ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಚುನಾವಣಾ ಆಯೋಗಕ್ಕೆ ದೂರು | Alleged Code of Conduct Violation
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ನಿಯೋಗ ಆಕ್ಷೇಪಿಸಿದೆ. ಈ ಕುರಿತು ನಿಯೋಗವು ಇಂದು ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದೆ.
ಸಿದ್ದರಾಮಯ್ಯನವರು ‘ಪ್ರಧಾನಿ ಮೋದಿ ಮತ್ತು ಬಿಜೆಪಿಯವರು ಹಿಟ್ಲರ್, ಮುಸಲೋನಿ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟವರು. ಮೋದಿ ಅವರ ಕೈಯಲ್ಲಿ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಸುರಕ್ಷಿತವಾಗಿಲ್ಲ’ ಎಂದಿದ್ದಾರೆ. ಅಲ್ಲದೆ, ‘400ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಂವಿಧಾನ ಬದಲಿಸುವುದಾಗಿ ಬಿಜೆಪಿ ಹೇಳುತ್ತಿದೆ. ದೇಶದಲ್ಲಿಂದು ಸಂವಿಧಾನವು ಅಪಾಯದಲ್ಲಿದೆ. ಪ್ರಧಾನಿ ಪ್ರಜಾಪ್ರಭುತ್ವದ ವಿರುದ್ಧದ ಸರ್ವಾಧಿಕಾರಿ ಆಗಿ ಬದಲಾಗಿದ್ದಾರೆ. ಹೀಗಾಗಿ ಬಿಜೆಪಿ ಹಾಗೂ ಮೋದಿಯವರನ್ನು ಮತದಾರರು ತಿರಸ್ಕರಿಸಬೇಕು’ ಎಂದು ಹೇಳಿರುವ ಕುರಿತು ಗಮನ ಸೆಳೆಯಲಾಗಿದೆ. ಸಿದ್ದರಾಮಯ್ಯನವರನ್ನು ಸ್ಟಾರ್ ಪ್ರಚಾರಕ ಪಟ್ಟಿಯಿಂದ ಕೈಬಿಡಲು ನಿರ್ದೇಶನ ನೀಡಬೇಕು ಮತ್ತು ಮುಂದೆ ಅವರು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳದಂತೆ ಆದೇಶಿಸಬೇಕು ಎಂದು ನಿಯೋಗ ಮನವಿ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರು ಮೈಸೂರು ತಾಲ್ಲೂಕಿನ ವಿವಿಧೆಡೆ “ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ಡಬಲ್ ಗ್ಯಾರಂಟಿ ಯೋಜನೆಗಳು ದೊರಕಲಿವೆ. ಹೀಗಾಗಿ ವಚನಭ್ರಷ್ಟ ಬಿಜೆಪಿ ಅಭ್ಯರ್ಥಿ ಸೋಲಿಸಿ. ಬಿಜೆಪಿ ಸರಕಾರ ನುಡಿದಂತೆ ನಡೆಯದ ವಚನಭ್ರಷ್ಟ ಸರಕಾರ” ಎಂದು ಪ್ರಚಾರ ಭಾಷಣ ಮಾಡಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆ ಮಾತ್ರವಲ್ಲದೆ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಗೆ ವಿರುದ್ಧವಾಗಿದೆ. ಆದ್ದರಿಂದ ಯತೀಂದ್ರ ಸಿದ್ದರಾಮಯ್ಯನವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿ ಆಗ್ರಹಿಸಿದೆ.
ಕರ್ನಾಟಕ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಯಶ್ ಗೌಡರವರು ಎಕ್ಸ್ ನಲ್ಲಿ ‘ದಿ ಡಿಕ್ಟೇಟರ್’ ವಾಟರ್ ಮಾರ್ಕಿನೊಂದಿಗೆ ನರೇಂದ್ರ ಮೋದಿಯವರ ಫೋಟೊ ಬಳಸಿದ್ದರ ವಿರುದ್ಧ ಆಕ್ಷೇಪ ಸೂಚಿಸಲಾಗಿದೆ. ಮತದಾರರಲ್ಲಿ ದ್ವೇಷ ಭಾವನೆ ಮೂಡಿಸುತ್ತಿರುವ ಯಶ್ ಗೌಡರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.
ಶಾಸಕ ಎಸ್. ಸುರೇಶ್ ಕುಮಾರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ, ರಾಜ್ಯ ವಕ್ತಾರ ಹೆಚ್.ಎನ್. ಚಂದ್ರಶೇಖರ್, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್, ಪ್ರಮುಖರು ಈ ಮನವಿ ಸಲ್ಲಿಸಿದರು