ಬೆಂಗಳೂರು: ವಿನಾಕಾರಣ ನಮ್ಮ ಪಕ್ಷದ ಮೇಲೆ ದೂರು ಹಾಕುವ ಕೆಲಸ ನಡೆಯುತ್ತಿದೆ. ನಾವೇನು ಮುಚ್ಚುಮರೆ ಮಾಡುತ್ತಿಲ್ಲ. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಜಾತ್ಯತೀತ ತತ್ವಗಳನ್ನು ಗಾಳಿಗೆ ತೂರಿದೆ ಎನ್ನುವ ಆರೋಪ ಸರಿಯಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜತೆ ಮೈತ್ರಿಗೆ ನಾನೇ ಒಪ್ಪಿಗೆ ನೀಡಿದ್ದೇನೆ. ಈ ಮೈತ್ರಿಗೆ ಅನುಮತಿ ಕೊಟ್ಟಿದ್ದೇನೆ. ನಮ್ಮ ಪಕ್ಷದ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಆಬಿಫ್ರಾಯ ಪಡೆದೇ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಅವರು ಹೇಳಿದರು.
ನಾವು ಜಾತ್ಯಾತೀತ ಸಿದ್ಧಾಂತವನ್ನು ಗಾಳಿಗೆ ತೂರುವ ರಾಜಕಾರಣವನ್ನು ಯಾವತ್ತೂ ಮಾಡಿಲ್ಲ. ಬಿಜೆಪಿ ನಾಯಕರ ಜೊತೆ ಕದ್ದುಮುಚ್ಚಿ ಮಾತನಾಡುವ ಅವಶ್ಯಕತೆ ನಮಗಿಲ್ಲ. ಕಳೆದ ಅರವತ್ತು ವರ್ಷಗಳಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲು ಬಿಟ್ಟಿಲ್ಲ. ಮುಂದೆಯೂ ನಾವು ಎಲ್ಲರ ಪರವಾಗಿ ಇರುತ್ತೇವೆ ಎಂದು ಅವರು ಹೇಳಿದರು.
ಅನಗತ್ಯವಾಗಿ ಮೈತ್ರಿಯಲ್ಲಿ ತಪ್ಪು ಹುಡುಕುವ ವ್ಯರ್ಥ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದ ಅವರು; ರಾಜ್ಯದಲ್ಲಿ ನಮ್ಮ ಬಿಜೆಪಿ ಸರಕಾರ ಬರಲು ಅವಕಾಶ ಮಾಡಿಕೊಟ್ಟಿದ್ದು ಯಾರು? ಕಾಂಗ್ರೆಸ್ ಪಕ್ಷದ ನಾಯಕರಾದ ಗುಲಾಂ ನಬಿ ಆಝಾದ್, ರಾಜಾಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಸೇರಿ ಎಲ್ಲರೂ ಒತ್ತಡ ಹೇರಿ 2018ರಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದರು. ಯಾವ ಕಾರಣಕ್ಕೂ ನಿಮ್ಮ ಸಹವಾಸ ಬೇಡ ಎಂದು ನಾನು ಕಾಂಗ್ರೆಸ್ ನಾಯಕರಿಗೆ ಹೇಳಿದ್ದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಜತೆ ಮೈತ್ರಿ ಯಾಕೆ ಅಂತ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಪಾರ್ಥ ಕಲ್ಪಿಸಿ ರಾಜ್ಯಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಆದರೆ, ರಾಜಕೀಯ ಬೆಳವಣಿಗೆ, ಪಕ್ಷದ ಹಿತದೃಷ್ಟಿಯಿಂದ ಕೆಲವು ಹೆಜ್ಜೆಗಳನ್ನು ಇಟ್ಟಿದ್ದೇವೆ. ಜೆಡಿಎಸ್ ಬಗ್ಗೆ ಲಘುವಾಗಿ ಯಾರೂ ಮಾತನಾಡುವುದು ಬೇಡ. ಇದು ಅವಕಾಶವಾದಿ ರಾಜಕಾರಣ ಅಲ್ಲ. ಪಕ್ಷ ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ನಾನು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮಾತಾಡಿದ್ದೇನೆ. ಕರ್ನಾಟಕ ರಾಜ್ಯದ ಪರಿಸ್ಥಿತಿ ಏನಿದೆ ಎಂಬುದರ ಬಗ್ಗೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಜತೆ ಮಾತಾಡಿದ್ದೇನೆ. ಯಾವುದೇ ಸಮುದಾಯಕ್ಕೆ ಈ ಪಕ್ಷದಿಂದ ಅನ್ಯಾಯ ಆಗಲು ಬಿಟ್ಟಿಲ್ಲ. ಕುಮಾರಸ್ವಾಮಿ ಅವರ ಸರಕಾರ ತೆಗೆದಿದ್ದು ಯಾರು? ಹದಿನೇಳು ಜನ ಶಾಸಕರನ್ನು ಮುಂಬೈಗೆ ಕಳಿಸಿಕೊಟ್ಟಿದ್ದು ಯಾರು? ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಪ್ರಧಾನಿ ಟೀಕಾಪ್ರಹಾರ ನಡೆಸಿದರು.
ಬಾಯಿಮಾತಿನಲ್ಲಿ ಜಾತ್ಯತೀತ ತತ್ವವನ್ನು ಹೇಳುತ್ತಿರುವ ಕಾಂಗ್ರೆಸ್ ಇತಿಹಾಸದ ಉದ್ದಕ್ಕೂ ಮಾಡಿದ್ದು ಜಾತ್ಯತೀತತೆ ಅಪಚಾರವನ್ನೇ. ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿಟೀಂ ಎನ್ನುವ ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಮೈತ್ರಿಯಿಂದ ನಮ್ಮ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅದರ ಬಗ್ಗೆ ಯಾರಿಗೂ ಕಳವಳ ಬೇಕಿಲ್ಲ. ಅಮಿತ್ ಶಾ, ಜೆ.ಪಿ.ನಡ್ಡಾ ಅವರ ಜತೆ ಚರ್ಚೆ ಆಗಿದೆ. ಪ್ರಧಾನಿಗಳ ಜತೆ ಇನ್ನೂ ಮಾತುಕತೆ ಆಗಿಲ್ಲ. ನಮ್ಮ ಪಕ್ಷಕ್ಕೆ ಈ ಮೈತ್ರಿಯಿಂದ ಧಕ್ಕೆ ಆಗುವುದಿಲ್ಲ. ಯಾರೂ ಪಕ್ಷ ತೊರೆಯುವುದಿಲ್ಲ. ಕರೆದು ಮಾತನಾಡುತ್ತೇನೆ. ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ನಡೆಸಿದ್ದರು. ಜಲಧಾರೆ ಕಾರ್ಯಕ್ರಮ ನೀಡಿದ್ದರು. ಆದರೆ ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ಅದಕ್ಕೆ ನಾವೇನೂ ಹೆದರುವ ಅವಶ್ಯಕತೆ ಇಲ್ಲ ಎಂದರು.
ದೇವದುರ್ಗ ಶಾಸಕಿ ಕರೆಮ್ಮ ನಾಯಕ ಅವರು ಮಂಗಳವಾರ ರಾತ್ರಿ ನನಗೆ ದೂರವಾಣಿ ಕರೆ ಮಾಡಿದ್ದರು. ನಿಮ್ಮಿಂದ ಮತ್ತು ಕುಮಾರಸ್ವಾಮಿ ಅವರಿಂದ ನನ್ನನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನೀವಿಬ್ಬರೂ ಬದುಕಿರುವ ತನಕ ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ, ಅವರ ಕುಯುಕ್ತಿ ಫಲಿಸುವುದಿಲ್ಲ ಎಂದು ಮಾಜಿ ಪ್ರಧಾನಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.