ಬೆಂಗಳೂರು, ಸೆ.23: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ನಂಬಿಸಿ ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಸಂಬಂಧ ಚೈತ್ರಾ ಸೇರಿ 7 ಮಂದಿ ಆರೋಪಿಗಳನ್ನು ಅ.6ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ಮೂರನೆ ಎಸಿಎಂಎಂ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.
ಚೈತ್ರಾ ಕುಂದಾಪುರ ಜೊತೆಗೆ ಉಳಿದ ಆರೋಪಿಗಳಾದ ಗಗನ್ ಕಡೂರ್, ಪ್ರಜ್ವಲ್, ರಮೇಶ್, ಚೆನ್ನಾನಾಯ್ಕ್, ಧನರಾಜ್, ಶ್ರೀಕಾಂತ್ ಸೇರಿ ಏಳು ಮಂದಿಯನ್ನೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದ್ದು, ಇದರ ಬೆನ್ನಲ್ಲೇ ಚೈತ್ರಾ ಮತ್ತು ಅವರ ಸಂಗಡಿಗರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.
ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ವಶಕ್ಕೆ ನೀಡಲಾಗಿದ್ದ 10 ದಿನಗಳ ಕಾಲಾವಕಾಶ ಸೆ.23ಕ್ಕೆ ಪೂರ್ಣಗೊಂಡ ಹಿನ್ನಲೆ, ಸಿಸಿಬಿ ಅಧಿಕಾರಿಗಳು ಶನಿವಾರ 7 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಬಳಿಕ ಆರೋಪಿಗಳಿಗೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವಂತೆ ಆದೇಶಿಸಿತು. ಅದರಂತೆ ಚೈತ್ರಾ ಮತ್ತು ಸಂಗಡಿಗರು ಅ.6ರ ವರೆಗೆ ನ್ಯಾಯಾಂಗ ಬಂಧನದಲ್ಲೇ ಇರಲಿದ್ದಾರೆ. ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಿತು.
ತಡವಾಗಿ ಬಂಧಿತನಾದ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಹಿರೇಹಡಗಲಿ ಅಭಿನವ ಹಾಲಾಶ್ರೀ ಸ್ವಾಮೀಜಿಯವರ ಸಿಸಿಬಿ ವಿಚಾರಣೆ ಅವಧಿ ಸೆ.29ರ ವರೆಗೆ ಮುಂದುವರಿಯಲಿದೆ.