ಬೆಂಗಳೂರು, ಸೆ.23: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ 2023ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ನಿರ್ಮಾಪಕ, ವಿತರಕ ಎನ್.ಎಮ್. ಸುರೇಶ್ ಆಯ್ಕೆಯಾಗಿದ್ದಾರೆ.
ಎನ್.ಎಮ್.ಸುರೇಶ್, ಮಾರ್ಸ್ ಸುರೇಶ್, ಶಿಲ್ಪಾ ಶ್ರೀನಿವಾಸ್ ಮತ್ತು ಎ.ಗಣೇಶ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಚುನಾವಣಾ ಫಲಿತಾಂಶ ಬಳಿಕ 120 ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಎನ್.ಎಮ್. ಸುರೇಶ್ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿದ್ದ ಶಿಲ್ಪಾ ಶ್ರೀನಿವಾಸ್ 217 ಮತಗಳು, ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181 ಮತಗಳು, ಎನ್.ಎಮ್. ಸುರೇಶ್ 337 ಹಾಗೂ ಎ.ಗಣೇಶ್ 204 ಮತಗಳನ್ನು ಪಡೆದಿದ್ದಾರೆ.
ಎನ್.ಎಮ್. ಸುರೇಶ್ ನೂತನ ಫಿಲಂ ಚೇಂಬರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮಿಳಾ ಜೋಶಾಯಿ, ಕಾರ್ಯದರ್ಶಿಯಾಗಿ ಭಾ.ಮಾ. ಗಿರೀಶ್, ಖಜಾಂಚಿಯಾಗಿ ಜಯಸಿಂಹ ಮಸೂರಿ ಆಯ್ಕೆಯಾಗಿದ್ದಾರೆ.