ಚಿಕ್ಕಮಗಳೂರು, ಆ.15: ರಾಜಕಾರಣದಲ್ಲಿ ಮಾಸ್ಟರ್ ಮೈಂಡ್ ಉಗ್ರ ಯಾರಾದ್ರು ಇದ್ರೆ ಅದು ಸಿ.ಟಿ.ರವಿ, ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರ ಶಾರಿಕ್‍ಗಿಂತ ಸಿ.ಟಿ.ರವಿ ಒಂದು ಕೈ ಮೇಲಿದ್ದಾರೆ ಎಂದು ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಕೊಪ್ಪ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿ.ಟಿ.ರವಿ ರಾಜಕೀಯದಲ್ಲಿ ಹಲವರನ್ನ ಬಲಿ ಕೊಟ್ಟಿದ್ದಾರೆ. ಗೋರಿ, ದರ್ಗಾಗಳನ್ನು ಸಂಚು ನಡೆಸಿ ದ್ವಂಸ ಮಾಡಿದ್ದಾರೆ. ಮಹೇಂದ್ರ ಕುಮಾರ್ ಅವರನ್ನು ಬಳಸಿಕೊಂಡು ಗೋರಿ, ದರ್ಗಾ, ದೇವಸ್ಥಾನಗಳನ್ನ ದ್ವಂಸ ಮಾಡಿದ್ದಾರೆ ಎಂದು ದೂರಿದ್ದಾರೆ.
ಸಿ.ಟಿ.ರವಿ ಪದೇ-ಪದೇ ತಮ್ಮ ನಾಲಿಗೆಯನ್ನ ಹರಿಬಿಡ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಅಂದಿದ್ದರು. ನಂಜೇಗೌಡ, ಉರಿಗೌಡ ಅವರನ್ನು ಮುನ್ನಲೆಗೆ ತಂದು ಒಕ್ಕಲಿಗ ಸಮುದಾಯದವರನ್ನು ಅವಮಾನಿಸಿದ್ದರು. ಈಗ ಮತ್ತೆ ಡಿಸಿಎಂ ಡಿಕೆಶಿ ಹೆಸರಿಗೆ ಕೊತ್ವಾಲ್ ಹೆಸರನ್ನು ಸೇರಿಸಿದ್ದಾರೆ. ಸಿ.ಟಿ.ರವಿ ಅವರನ್ನು ಚಿಕ್ಕಮಗಳೂರಿನ ಜನ ಮನೆಗೆ ಕಳಿಸಿದ್ದಾರೆ. ಆದರೂ ಅವರು ಇಂತಹಾ ವಿಕೃತ ಹೇಳಿಕೆಗಳಿಂದ ಖುಷಿ ಪಡುತ್ತಿದ್ದಾರೆ, ಉಗ್ರ ಸಿ.ಟಿ.ರವಿ ಅವರನ್ನು ಗಡಿಪಾರು ಮಾಡಬೇಕು ಎಂದು ಹೇಳಿದ್ದಾರೆ.
ಸಿ.ಟಿ.ರವಿ ಅವರು ಇಂತಹ ಹೇಳಿಕೆ ಪದೇ ಪದೇ ನೀಡಿ ವಿಕೃತಾನಂದ ಪಡುವುದನ್ನು ಬಿಡಬೇಕು. ಇದು ಅವರಿಗೆ ಕೊನೆಯ ಎಚ್ಚರಿಕೆ, ಇನ್ನು ಮುಂದೆ ಅವರು ಇಂತಹ ಹೇಳಿಕೆ ಬಳಸುವಾಗ ಎಚ್ಚರಿಕೆ ವಹಿಸಬೇಕು. ತಪ್ಪಿದಲ್ಲಿ ಕಿಸಾನ್ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡು ರಾಜ್ಯದಿಂದ ಗಡಿಪಾರಿಗೆ ಒತ್ತಾಯ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.