ಕಮಿಷನ್ ಆರೋಪ: ಬಿಬಿಎಂಪಿ ಮುಖ್ಯ ಆಯುಕ್ತರಿಂದ ಸ್ಪಷ್ಟನೆಗೆ ಮುಂದಾದ ರಾಜ್ಯಪಾಲರು – Kannada News | BBMP contractors complaint against DK Shivakumar Governor seeks clarification from chief commissioner
ಬಾಕಿ ಬಿಲ್ ಬಿಡುಗಡೆ ಮಾಡಲು ಕಮಿಷನ್ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರರ ಸಂಘವು ರಾಜ್ಯಪಾಲರಿಗೆ ದೂರು ನೀಡಿತ್ತು. ಈ ಸಂಬಂಧ ರಾಜ್ಯಪಾಲರು ಬಿಬಿಎಂಪಿ ಮುಖ್ಯ ಆಯುಕ್ತರಿಂದ ಸ್ಪಷ್ಟನೆ ಪಡೆಯಲು ಮುಂದಾಗಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್, ಬಿಬಿಎಂಪಿ, ಡಿಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 10: ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D. K. Shivakumar) ವಿರುದ್ಧ ಗುತ್ತಿಗೆದಾರರು ದೂರು ನೀಡಿದ ಹಿನ್ನೆಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಿಬಿಎಂಪಿ (BBMP) ಮುಖ್ಯ ಆಯುಕ್ತರಿಂದ ಸ್ಪಷ್ಟನೆ ಪಡೆಯಲು ಮುಂದಾಗಿದ್ದಾರೆ. ಈ ನಡುವೆ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ.
ಬಿಲ್ ಪಾವತಿ ದೂರಿನ ಸಂಬಂಧ ಬಿಬಿಎಂಪಿ ಗುತ್ತಿಗೆದಾರರು ದೂರು ನೀಡಿದ ಹಿನ್ನೆಲೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಂದ ಸ್ಪಷ್ಟನೆ ಪಡೆಯಲು ರಾಜ್ಯಪಾಲರು ಮುಂದಾಗಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಭೇಟಿಗೆ ಸೂಚನೆ ನೀಡಿದ್ದಾರೆ.
ರಾಜ್ಯಪಾಲರ ಈ ನಡೆಯ ನಡುವೇ ಅಧಿಕಾರಿಗಳ ಜೊತೆ ಚರ್ಚೆಗೆ ಡಿ. ಕೆ. ಶಿವಕುಮಾರ್ ಮುಂದಾಗಿದ್ದಾರೆ. ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇಂದು ಸಂಜೆ ಬಿಬಿಎಂಪಿ ಪ್ರಮುಖ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿ ಸಂಬಂಧ ಗುತ್ತಿಗೆದಾರರಿಗೆ ಬಿಲ್ ಪಾವತಿ ಬಾಕಿ ಇರಿಸಲಾಗಿದೆ. ಇದನ್ನು ಬಿಡುಗಡೆ ಮಾಡುವಂತೆ ಗುತ್ತಿಗೆದಾರರು ಮನವಿ ಮಾಡಿದ್ದರೂ ಡಿಕೆ ಶಿವಕುಮಾರ್ ಅವರು ಒಲ್ಲೆ ಎಂದಿದ್ದರು. ಇದಕ್ಕೆ ಕೆಲವೆಡೆ ಕಾಮಗಾರಿಗಳು ಬಾಕಿ ಇರುವುದೇ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದರು.
ಈ ಬೆಳವಣಿಗೆಯ ನಡುವೆ ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿದ್ದಲ್ಲದೆ, 10-15 ಪರ್ಸೆಂಟ್ ಬೇಡಿಕೆ ಇಟ್ಟಿದ್ದಾಗಿ ಡಿಕೆ ಶಿವಕುಮಾರ್ ವಿರುದ್ಧ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದರು. ಇದು ವಿಪಕ್ಷ ಬಿಜೆಪಿ ಪಾಲಿಗೆ ಅಸ್ತ್ರವಾಗಿ ಪರಿಣಮಿಸಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಬಾಕಿ ಬಿಲ್ ಬಿಡುಗಡೆಗೆ ಮನವಿ ಮಾಡಿದ್ದಾರೆ. ಆದರೆ, ಕಾಮಗಾರಿಗಳ ಬಗ್ಗೆ ತನಿಖೆಗಾಗಿ ಸಮಿತಿ ರಚಿಸಲಾಗಿದ್ದು, ವರದಿ ಬಂದ ನಂತರವೇ ನಿರ್ಧಾರ ಮಾಡಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.