40 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ – Kannada News | Karnataka government orders transfer of 40 inspectors after controversy
Karnataka Police Inspector Transfer; ಆಗಸ್ಟ್ 1ರಂದು 211 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ ನಂತರ ಆದೇಶಕ್ಕೆ ತಡೆ ನೀಡಿತ್ತು. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ವಿಚಾರ ರಾಜ್ಯದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ 40 ಮಂದಿ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಬೆಂಗಳೂರು, ಆಗಸ್ಟ್ 9: ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ವಿಚಾರವಾಗಿ ಇತ್ತೀಚೆಗೆ ಗೊಂದಲದ ನಿರ್ಧಾರಗಳಿಂದ ಪ್ರತಿಪಕ್ಷಗಳ ವಾಗ್ದಾಳಿಗೆ ಗುರಿಯಾಗಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬುಧವಾರ 40 ಮಂದಿ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ (Police Inspectors Transfer) ಆದೇಶ ಹೊರಡಿಸಿದೆ. ವಿಶೇಷವೆಂದರೆ, ಇಂದಿ ವರ್ಗಾವಣೆ ಆದೇಶದಲ್ಲಿಯೂ ಕೆಲವೊಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ತಡೆ ಮುಂದುವರಿಸಲಾಗಿದೆ. ಆಗಸ್ಟ್ 1ರಂದು 211 ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ ನಂತರ ಆದೇಶಕ್ಕೆ ತಡೆ ನೀಡಿತ್ತು. ಪೊಲೀಸ್ ಇಲಾಖೆಯಲ್ಲಿ (Police Department) ವರ್ಗಾವಣೆ ವಿಚಾರ ರಾಜ್ಯದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ತೀವ್ರ ಜಟಾಪಟಿ ನಡೆದಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು.
ಆಗಸ್ಟ್ 1ರಂದು ರಾತ್ರಿ 9 ಗಂಟೆ ಸುಮಾರಿಗೆ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆಗಸ್ಟ್ 2ರಂದು ಬೆಳಗ್ಗೆ 11 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯನ್ನು ತಡೆಹಿಡಿದು ಮತ್ತೊಂದು ಆದೇಶ ಹೊರಡಿಸಲಾಗಿಗತ್ತು. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಆದೇಶವನ್ನು ಹೊರಡಿಸಿ, ಎಂಟು ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿತ್ತು. ಆಗಸ್ಟ್ 2ರ ಮಧ್ಯಾಹ್ನದ ವೇಳೆಗೆ, ವರ್ಗಾವಣೆಗೊಂಡ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮುಂದಿನ ಆದೇಶದವರೆಗೆ ತಮ್ಮ ಹೊಸ ಪೋಸ್ಟಿಂಗ್‌ಗಳ ಉಸ್ತುವಾರಿಯನ್ನು ವಹಿಸಿಕೊಳ್ಳದಂತೆ ಸೂಚಿಸಲಾಗಿತ್ತು.
ಕೆಲವೇ ತಿಂಗಳಲ್ಲಿ ಹಲವಾರು ವಿವಾದ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಕೆಲವೇ ತಿಂಗಳಲ್ಲಿ ಹಲವು ವಿವಾದಗಳಿಗೆ ಗುರಿಯಾಗಿದೆ. ಉಸ್ತುವಾರಿ ಸಚಿವರು ಕೈಗೆ ಸಿಗುತ್ತಿಲ್ಲ ಎಂದು ಶಾಸಕರು ಮಾಡಿದ ಆರೋಪ, ಆ ಕುರಿತು ಸಿದ್ದರಾಮಯ್ಯ ಅವರಿಗೆ ಬತ್ರ ಬರೆದಿರುವುದು ಮೊದಲಿಗೆ ಭಾರಿ ವಿವಾದ ಸೃಷ್ಟಿಸಿತ್ತು. ಬಳಿಕ ಆ ಪತ್ರ ನಕಲಿ ಎಂದು ಕಾಂಗ್ರೆಸ್ ತೇಪೆಹಚ್ಚಿತ್ತು. ನಂತರ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರ ಬರೆದಿದ್ದ ಶಾಸಕ ಬಸವರಾಜ ರಾಯರೆಡ್ಡಿ, ಆನಂತರ ಹಲವು ಬಾರಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಶಾಸಕರಿಗೆ ಅಭಿವೃದ್ಧಿಗೆ ಅನುದಾನ ನೀಡಲಾಗದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದು ಕೂಡ ಸಾಕಷ್ಟು ಚರ್ಚೆಗೆ, ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಆಬಳಿಕ ಇನ್ಸ್ಪೆಕ್ಟರ್ ವರ್ಗಾವಣೆ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಗುತ್ತಿಗೆದಾರರು ಬಿಲ್ ಕ್ಲಿಯರ್ ಮಾಡದ ಬಗ್ಗೆ ಆರೋಪ ಮಾಡಿದ್ದು, ಡಿಕೆ ಶಿವಕುಮಾರ್ ವಿರುದ್ಧವೂ ಲಂಚದ ಆರೋಪ ಕೇಳಿಬಂದಿದೆ.
Published On – 8:46 pm, Wed, 9 August 23