ಗದಗ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್, ಸಚಿವರ ಕೈ ಸೇರಿದ ವರದಿ – Kannada News | Report of Gadag Tourism Integrated Development Project handed over to Minister H K Patil in Lakkundi Temple
ಗದಗ ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಯೋಜನೆಗಾಗಿ ರಚಿಸಿದ ಸಮಿತಿಯು ಇಂದು ಅಧ್ಯಯನ ವರದಿಯನ್ನು ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ಹಸ್ತಾಂತಿಸಿದೆ. 800 ಕೋಟಿ ಅನುದಾನದಲ್ಲಿ ಲಕ್ಕುಂಡಿ ದೇಗುಲಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಸಚಿವರು ಇದೇ ವೇಳೆ ಹೇಳಿದರು.
ಸಚಿವ ಹೆಚ್ಕೆ ಪಾಟೀಲ್ಗೆ ಅಧ್ಯಯನ ವರದಿ ಸಲ್ಲಿಸಿದ ಗದಗ ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಸಮಿತಿ
ಗದಗ, ಆಗಸ್ಟ್ 8: ಪ್ರವಾಸೋದ್ಯಮ ಇಲಾಖೆಯಿಂದ ಗದಗ ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಸಮಿತಿ ರಚಿಸಿ ಜಿಲ್ಲೆಯ ಪ್ರವಾಸೋದ್ಯಮ (Tourism) ಸಮಗ್ರ ಅಭಿವೃದ್ಧಿ ಯೋಜನೆಯ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಸತತ ಎರಡು ತಿಂಗಳ ಕಾಲ ಜಿಲ್ಲೆಯ ಅಧ್ಯಯನ ನಡೆಸಿದ ಅಧ್ಯಯನ ವರದಿಯನ್ನು ಹಿರಿಯ ಅಧಿಕಾರಿ ಮನೋಜ ಕುಮಾರ ನೇತೃತ್ವದ ಸಮಿತಿಯು ಇಂದು ಲಕ್ಕುಂಡಿಯ ಕುಂಬಾರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ (H. K. Patil) ಅವರಿಗೆ ಸಲ್ಲಿಸಿದರು.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಲ್ಲಿಸಿದ ಅಧ್ಯಯನ ವರದಿ ಸ್ವೀಕರಿಸಿ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ, ಜಿಲ್ಲೆಯ ನೈಸರ್ಗಿಕ ಸಂಪತ್ತು ಮತ್ತು ಪಾರಂಪರಿಕ ಸ್ಥಳಗಳ ವೈಶಿಷ್ಟ್ಯತೆ ಕುರಿತು ದೇಶದಲ್ಲಿಯೇ ತನ್ನದೇ ಆದ ಸ್ಥಾನಮಾನವನ್ನು ಗದಗ ಜಲ್ಲೆ ಹೊಂದಿದೆ. ಗದಗ ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಯೋಜನೆಯನ್ನು ನಿಖರವಾಗಿ ತಯಾರಿಸಿ ಸಲ್ಲಿಸಿದ ಸಮಿತಿಗೆ ಸರ್ಕಾರದ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಜಿಲ್ಲೆಯ ಕಪ್ಪತಗುಡ್ಡ, ಲಕ್ಕುಂಡಿ, ಡಂಬಳ, ಮಾಗಡಿ ಕೆರೆ, ತ್ರಿಕೂಟೇಶ್ವರ ದೇವಾಲಯ, ವೀರನಾರಾಯಣ ದೇವಸ್ಥಾನ, ಶಿರಹಟ್ಟಿಯ ಭಾವೈಕ್ಯತೆಯ ಕೇಂದ್ರ ಮುಂತಾದ ಪ್ರವಾಸಿ ಕೇಂದ್ರಗಳು ಶಿಕ್ಷಣ ಹಾಗೂ ನೆಮ್ಮದಿ ನೀಡುವ ತಾಣಗಳಾಗಿವೆ. ಈ ಎಲ್ಲ ಪ್ರಸಿದ್ಧ ಪ್ರವಾಸಿ ತಾಣಗಳನ್ನು ವರದಿಯಲ್ಲಿ ಉಲ್ಲೇಖಿಸಿ ಅಭಿವೃದ್ಧಿ ಪಡಿಸಲು ಯೋಜನೆ ಸಿದ್ಧಪಡಿಸಿ ನೀಡಲಾಗಿದೆ. ವರದಿ ಅನುಸಾರ ಪ್ರವಾಸೋದ್ಯಮ ಅಭಿವೃದ್ಧಿ ಮಾಡಿ, ದೇಶ ವಿದೇಶಕ್ಕೆ ಪರಿಚಯಿಸಲು ಕ್ರಮ ವಹಿಸಲಾಗುವುದು ಎಂದರು.
804 ಕೋಟಿ ರೂ.ಗಳ ಅಂದಾಜು ಮೊತ್ತದ ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಯೋಜನೆಯನ್ನು ತಯಾರಿಸಿ ಮಂಡಿಸಿದ್ದು, ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ಶಿಫಾರಸ್ಸುಗಳನ್ನು ಮಾಡಲಾಗಿದೆ. ಜಿಲ್ಲೆಯ ಪ್ರಮುಖ ತಾಣಗಳು ಯುನೆಸ್ಕೋದ ಪಾರಂಪರಿಕ ಪಟ್ಟಿಯಲ್ಲಿ ಬರುವಂತಹ ವೈಶಿಷ್ಟ್ಯತೆ ಹೊಂದಿದೆ. ವರದಿಯು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲು ಸುಲಭವಾಗಲು ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವದಿ ಕಾಲದ ಯೋಜನೆಗಳನ್ನು ನೀಡಿದ್ದು ಅನುಷ್ಠಾನಕ್ಕೆ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮನೋಜ ಕುಮಾರ ಮಾತನಾಡಿ, ಜಿಲ್ಲೆಯ ಎಲ್ಲ ಪಾರಂಪರಿಕ ಹಾಗೂ ಪ್ರವಾಸೋದ್ಯಮ ತಾಣಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಸಮಿತಿಯಿಂದ ಸುಧೀರ್ಘವಾಗಿ ಮೂರು ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ. ಜಿಲ್ಲೆಯ 56 ವಿಶಿಷ್ಟ ಸ್ಮಾರಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ ಎಂದರು.
ಜಿಲ್ಲೆಯ ಸಂಗೀತ ಕ್ಷೇತ್ರ, ಪಾರಂಪರಿಕ ಸಂಪತ್ತು, ಸಹಕಾರ, ಪವನಶಕ್ತಿ, ಸೌರಶಕ್ತಿ ಕುರಿತು ಅಧ್ಯಯನ ಮಾಡಲಾಗಿದೆ. ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಕುರಿತಂತೆ ಅಲ್ಪಾವಧಿಯಲ್ಲಿ ಉತ್ತಮ ಯೋಜನೆ ತಯಾರಿಸಿ ಸರ್ಕಾರಕ್ಕೆ ನೀಡುವಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಜಿಲ್ಲಾಧಿಕಾರಿಗಳು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲೆಯ ತಜ್ಞರು, ಸಂಪೂರ್ಣ ಸಹಕಾರ ನೀಡಿದ್ದು, ಎಲ್ಲರಿಗೂ ಧನ್ಯವಾದಗಳು ಎಂದು ಮನೋಜ ಕುಮಾರ ಹೇಳಿದರು.