ನರ್ಸ್ಗಳನ್ನು ಗುರಿಯಾಗಿಸಿಕೊಂಡು ರೀಲ್ಸ್: ಹುಬ್ಬಳ್ಳಿಯ ಕಿಮ್ಸ್ನ 11 ಎಂಬಿಬಿಎಸ್ ವಿದ್ಯಾರ್ಥಿಗಳು ಅಮಾನತು – Kannada News | Hubballi Kims Hospital Instagram reels; 11 MBBS Students Suspended
ನರ್ಸ್ಗಳ ಬಗ್ಗೆ ಅವಹೇನಕಾರಿಯಾಗಿ ರೀಲ್ಸ್ ಮಾಡಿದ್ದ ಹುಬ್ಬಳ್ಳಿಯ ಕಿಮ್ಸ್ನ 11 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು ಒಂದು ವಾರದ ಮಟ್ಟಿಗೆ ಅಮಾನತು ಮಾಡಿ ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ.
ರೀಲ್ಸ್ ಮಾಡಿದ ವಿದ್ಯಾರ್ಥಿಗಳು
ಹುಬ್ಬಳ್ಳಿ: ನರ್ಸ್ಗಳ ಬಗ್ಗೆ ಅವಹೇನಕಾರಿಯಾಗಿ ರೀಲ್ಸ್ ಮಾಡಿದ್ದ ಹುಬ್ಬಳ್ಳಿಯ (Hubballi) ಕಿಮ್ಸ್ನ (KIMS) 11 ಜನ ವೈದ್ಯಕೀಯ ವಿದ್ಯಾರ್ಥಿಗಳನ್ನು (Medical Students) ಒಂದು ವಾರದ ಮಟ್ಟಿಗೆ ಅಮಾನತು ಮಾಡಿ ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳ ರೀಲ್ಸ್ ವೈರಲ್ ಆಗುತ್ತುದ್ದಂತೆ ಆಕ್ರೋಶಗೊಂಡಿದ್ದ ಕಿಮ್ಸ್ ನರ್ಸ್ಗಳು ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಹೀಗಾಗಿ ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ. ರೀಲ್ಸ್ ಮಾಡಿದ್ದು ಮನರಂಜನೆಗೆ. ಆದರೂ ನಾವು ನರ್ಸ್ಗಳ ಬಳಿ ಕ್ಷಮೆ ಕೇಳುತ್ತೇವೆ ಎಂದು ವಿದ್ಯಾರ್ಥಿಗಳು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.
ಇನ್ನು ವಿದ್ಯಾರ್ಥಿಗಳು ನರ್ಸ್ಗಳ ಬಗ್ಗೆ ಅವಹೇಳನಕಾರಿಯಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟ ಹಿನ್ನಲೆಯಲ್ಲಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕೋಲಾರ ಜಿಲ್ಲಾಸ್ಪತ್ರೆ ಎದುರು ನರ್ಸ್ಗಳು ಪ್ರತಿಭಟನೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು.
ಏನಿದು ಘಟನೆ
ರಾಜ್ಯದ ಪ್ರಸಿದ್ಧ ಹುಬ್ಬಳ್ಳಿಯ ಕಿಮ್ಸ್ನ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಯ ನರ್ಸ್ಗಳನ್ನು ಗುರಿಯಾಗಿಟ್ಟುಕೊಂಡು ಇನ್ಸ್ಟಾಗ್ರಾಮ್ನಲ್ಲಿ ರಿಲ್ಸ್ ಮಾಡಿದ್ದರು. ಯಾವುದೇ ಅನುಮತಿ ಪಡೆಯದೆ ಕಿಮ್ಸ್ ಆಸ್ಪತ್ರೆ ಒಳಗಡೆ ನಟ ಪ್ರಜ್ವಲ್ ದೇವರಾಜ್ ಅಭಿನಯದ ಭದ್ರ ಚಿತ್ರದ ನಂಬೆಡ ನಂಬೆಡ ಹುಡುಗಿರನ್ನು ನಂಬೇಡ ಅನ್ನೋ ಹಾಡಿಗೆ ವಿದ್ಯಾರ್ಥಿಗಳು ರೀಲ್ಸ್ ಮಾಡಿದ್ದರು.
ಈ ಹಾಡಿನ ಮಧ್ಯೆ ಬರುವ ನಂಬೆಡ ನಂಬೆಡ ನರ್ಸ್ಗಳನ್ನು ನಂಬೇಡ ಸಾಲಿಗೆ ನೃತ್ಯ ಮಾಡಿದ್ದರು. ಈ ವಿಡಿಯೋವನ್ನು ಮಹೇಶ್ ರೆಡ್ಡಿ ಎಂಬುವ ವಿದ್ಯಾರ್ಥಿಯ ಅಕೌಂಟ್ನಿಂದ ಪೋಸ್ಟ್ ಮಾಡಲಾಗಿತ್ತು.
ಈ ವಿಡಿಯೋ ಫುಲ್ ವೈರಲ್ ಆದ ಹಿನ್ನೆಲೆಯಲ್ಲಿ ಇದಕ್ಕೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೇ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಮತ್ತು ಧಾರವಾಡ ಜಿಲ್ಲಾ ಶುಶ್ರೂಷಕರ ಸಂಘ ಕಿಮ್ಸ್ ನಿರ್ದೇಶಕರಿಗೆ ಪತ್ರ ಬರೆದಿತ್ತು.
ಕಾಲೇಜು ವಿದ್ಯಾರ್ಥಿನಿಯರ ಬಗ್ಗೆ ಅವಹೇಳನಕಾರಿ ಪೋಸ್ಟ್: ಎಬಿವಿಪಿ ಪ್ರತಿಭಟನೆ
ಇನ್ನು ಹುಬ್ಬಳ್ಳಿಯ ಖಾಸಗಿ ಕಾಲೇಜು ವಿದ್ಯಾರ್ಥಿನಿಯರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದನ್ನು ಖಂಡಿಸಿ ನಗರದಲ್ಲಿ ಇಂದು ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿತು. ಕಿಡಗೇಡಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಚೆನ್ನಮ್ಮ ವೃತ್ತದಿಂದ ಮಿನಿ ವಿಧಾನಸೌಧವರೆಗೂ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 1:59 pm, Tue, 8 August 23