Prakash Raj: ದೇವಸ್ಥಾನಕ್ಕೆ ಭೇಟಿ ನೀಡಿದ್ದರ ಹಿಂದಿನ ಕಾರಣ ತಿಳಿಸಿದ ಪ್ರಕಾಶ್ ರೈ – Kannada News | Prakash Raj Explain why he Visited Temple In Kolluru
ಪ್ರಕಾಶ್ ರೈ ಅವರು ಕೊಲ್ಲೂರಿಗೆ ತೆರಳಿ ಚಂಡಿಕಾ ಹೋಮದಲ್ಲಿ ಭಾಗಿ ಆಗಿದ್ದರು. ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರಕಾಶ್ ರೈ ನಡೆಯನ್ನು ಅನೇಕರು ಟೀಕೆ ಮಾಡಿದ್ದರು.
ಪ್ರಕಾಶ್ ರಾಜ್
ನಟ ಪ್ರಕಾಶ್ ರಾಜ್ (Prakash Raj) ಅವರು ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಪ್ರಕಾಶ್ ರೈ ಅವರು ನಟನೆಯ ಜೊತೆಗೆ ತಮ್ಮ ಸಿದ್ಧಾಂತಗಳ ಮೂಲಕವೂ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಇತ್ತೀಚೆಗೆ ಅವರು ಕುಟುಂಬದ ಜೊತೆ ಕೊಲ್ಲೂರಿಗೆ ತೆರಳಿ ಚಂಡಿಕಾ ಹೋಮದಲ್ಲಿ ಭಾಗಿ ಆಗಿದ್ದರು. ಈ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರಕಾಶ್ ರೈ ನಡೆಯನ್ನು ಅನೇಕರು ಟೀಕೆ ಮಾಡಿದ್ದರು. ಈ ವಿಚಾರದಲ್ಲಿ ಪ್ರಕಾಶ್ ರೈ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ನಡೆದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
ಚಂಡಿಕಾ ಹೋಮದಲ್ಲಿ ಭಾಗಿ ಆಗಿದ್ದಕ್ಕೂ ಇದೆ ಕಾರಣ
ಪ್ರಕಾಶ್ ರೈ ಅವರು ಎಡಪಂಥೀಯ ಸಿದ್ದಾಂತಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಹೋಮ-ಹವನದಲ್ಲಿ ಭಾಗಿ ಆಗಿದ್ದನ್ನು ಕೆಲವರು ಟೀಕಿಸಿದ್ದರು. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿಗೆ ಗೌರವ ನೀಡಿ ತಾವು ಹೋಮದಲ್ಲಿ ಭಾಗಿ ಆಗಿದ್ದಾಗಿ ಅವರು ಹೇಳಿದ್ದಾರೆ. ‘ನಾನು ಹೋಮ-ಹವನದಲ್ಲಿ ಕೂರುವುದಿಲ್ಲ ಎಂಬುದು ಬೇರೆ ವಿಚಾರ. ಆದರೆ, ನನ್ನ ಪತ್ನಿ ಒಪ್ಪಿದ್ದನ್ನು ನಾನು ಗೌರವಿಸಬೇಕು. ಹೀಗಾಗಿ ನಾವು ಪೂಜೆ ಮಾಡಿಸಿದ್ದೇವೆ. ನಾನು ನನ್ನ ಪತ್ನಿಯನ್ನು ಗೌರವಿಸುತ್ತೇನೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ರಂಗಕೆಲೆಗೆ ಪ್ರೋತ್ಸಾಹ
ಪ್ರಕಾಶ್ ರೈಗೆ ಕಲೆಯ ಬಗ್ಗೆ ವಿಶೇಷ ಪ್ರೀತಿ ಇದೆ. ಹೀಗಾಗಿ, ರಂಗಭೂಮಿ ಬೆಳೆಸಲು ಅವರು ಸದಾ ಆಸಕ್ತಿ ತೋರಿಸುತ್ತಾರೆ. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಮಕ್ಕಳಿಗಾಗಿ ವಿಶೇಷವಾಗಿ ರಂಗಕಲೆ ಕಲಿಸಲು ಮುಂದಾಗಿದ್ದೆವೆ. ಪ್ರಪಂಚದ ಬೇರೆ ಬೇರೆ ಕವಿಗಳ, ಬರಹಗಾರರ ಬರವಣಿಗೆಗಳನ್ನು ಇಟ್ಟುಕೊಂಡು ನಾಟಕ ಮಾಡಲು, ಮಾಡಿಸಲು ಹೊರಟಿದ್ದೆವೆ. ಪ್ರೇಕ್ಷಕ, ನಟನ ನಡುವೆ ಬಾಂಧ್ಯವ್ಯ ಬೆಸೆಯಲು ಮುಂದಾಗಿದ್ದೆವೆ. ಮನುಷ್ಯನಲ್ಲಿ ಪ್ರೀತಿ ಇದೆ, ಅದನ್ನು ಹಂಚಿ ಬದುಕಬೇಕು’ ಎಂದಿದ್ದಾರೆ ಪ್ರಕಾಶ್ ರೈ.
ಕೇಂದ್ರ ಸರ್ಕಾರದ ವಿರುದ್ಧ ಟೀಕೆ
ಪ್ರಕಾಶ್ ರೈ ಅವರು ಹಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಈಗ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇತ್ತೀಚೆಗೆ ಮಾತನಾಡಿದ್ದ ಮೋದಿ, ಸಿದ್ದರಾಮಯ್ಯ ಸರ್ಕಾರ ನೀಡುತ್ತಿರುವ ಉಚಿತ ಯೋಜನೆಗಳನ್ನು ಟೀಕಿಸಿದ್ದರು. ಇದನ್ನು ಪ್ರಕಾಶ್ ರೈ ವಿರೋಧಿಸಿದ್ದಾರೆ. ‘ಗ್ಯಾರಂಟಿ ಯೋಜನೆಗಳು ಜನಪರವಾಗಿವೆ. ಇದರಿಂದ ಜನರಿಗೆ ಒಳ್ಳೆಯದಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗಳು ವಿರೋಧಿಸಿದ್ದಾರೆ. ಅವರ ಯೋಜನೆಗಳೇ ದೇಶದಲ್ಲಿ ವಿಫಲವಾಗಿದೆ. ಈ ಬಗ್ಗೆ ಮಾತನಾಡುವವರು ಯಾರು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ