EBM News Kannada
Leading News Portal in Kannada

ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಹೈಡ್ರಾಮ: ಬಿಜೆಪಿ ಬೆಂಬಲಿತ ಸದಸ್ಯರಿಂದ ಅಹೋರಾತ್ರಿ ಧರಣಿ – Kannada News | Vijayanagara News: High drama in gram panchayat president, vice president elections: BJP backed members stage sit in protest

0


Vijayanagara News: ಸೋಮವಾರ ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಭಾರೀ ಹೈಡ್ರಾಮದಿಂದ ಎರಡನೇ ಬಾರಿಗೆ ಮುಂದೂಡಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಇದು ರಾಜಕೀಯ ಪ್ರೇರಿತ ಎಂದು ಬಿಜೆಪಿ ಬೆಂಬಲಿತ ಸದಸ್ಯರು ಸ್ಥಳದಲ್ಲಿ ಪ್ರತಿಭಟನಾ ಧರಣಿಗೆ ಮುಂದಾದ ಘಟನೆ ಜರುಗಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾದ್ಯಕ್ಷ ಚುನಾವಣೆ

ವಿಜಯನಗರ, ಆಗಸ್ಟ್​ 07: ಹರಪನಹಳ್ಳಿ ತಾಲೂಕಿನ ತೊಗರಿಕಟ್ಟೆ ಗ್ರಾಮ ಪಂಚಾಯಿತಿಗೆ (gram panchayat) ಸೋಮವಾರ ನಡೆಯಬೇಕಿದ್ದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಭಾರೀ ಹೈಡ್ರಾಮದಿಂದ ಎರಡನೇ ಬಾರಿಗೆ ಮುಂದೂಡಿದ ಘಟನೆ ನಡೆದಿದ್ದು, ಇದು ರಾಜಕೀಯ ಪ್ರೇರಿತ ಎಂದು ಬಿಜೆಪಿ ಬೆಂಬಲಿತ ಸದಸ್ಯರು ಸ್ಥಳದಲ್ಲಿ ಪ್ರತಿಭಟನಾ ಧರಣಿಗೆ ಮುಂದಾದ ಘಟನೆ ಜರುಗಿತು.

ಆ. 2ರಂದು ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು, ಅಂದು ಅಧ್ಯಕ್ಷ ಸ್ಥಾನಕ್ಕೆ ಸರಿತಾಬಾಯಿ ಹಾಗೂ ಕೆಂಚವ್ವ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಣಕಾರ ಹನುಮಕ್ಕ, ತಾವರಗುಂದಿ ಶ್ರೀಕಾಂತ ನಾಮಪತ್ರ ಸಲ್ಲಿಸಿದ್ದರು, ಚುನಾವಣೆ ಪ್ರಕ್ರಿಯೆ ನಡೆದು, ಮತ ಎಣಿಕೆ ಸಂದರ್ಭದಲ್ಲಿ ಫಲಿತಾಂಶದಲ್ಲಿ ಗೊಂದಲ ಉಂಟಾದ ಪರಿಣಾಮ ಚುನಾವಣಾಧಿಕಾರಿ ಪ್ರಸನ್ನರವರು ಫಲಿತಾಂಶ ಘೋಷಣೆ ಮಾಡದೆ ಆ. 7ಕ್ಕೆ ಮರು ಚುನಾವಣೆ ನಡೆಸಲು ತೀರ್ಮಾನ ತೆಗೆದುಕೊಂಡಿದ್ದರು.

ಆ ಪ್ರಕಾರ ಆ.7ರಂದು ಚುನಾವಣೆಗೆ ಎಲ್ಲಾ ಸದಸ್ಯರಿಗೂ ನೋಟಿಸ್ ಜಾರಿ ಮಾಡಲಾಗಿತ್ತು. ಸೋಮವಾರ ಮರು ಚುನಾವಣೆ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಚುನಾವಣಾಧಿಕಾರಿ ಆಗಮಿಸಿದ್ದರು ಆದರೆ ಚುನಾವಣಾಧಿಕಾರಿಗೆ ಇದ್ದಕ್ಕಿದಂತೆ ಅನಾರೋಗ್ಯ ಉಂಟಾಗಿದೆ ಎಂದು ಹೇಳಿ ಅಲ್ಲಿಂದ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದರು.

ಇದರಿಂದ ಕೆರಳಿದ ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣೆ ಪ್ರಕ್ರಿಯೆ ನಡೆಸಿ, ಫಲಿತಾಂಶ ಘೋಷಣೆ ಮಾಡುವಂತೆ ಬಿಗಿಪಟ್ಟು ಹಿಡಿದರು. ನಂತರ ತಹಶೀಲ್ದಾರ ಗಿರೀಶಬಾಬು ಪಂಚಾಯಿತಿಗೆ ಆಗಮಿಸಿ ಸದಸ್ಯರೊಂದಿಗೆ ಚರ್ಚೆ ನಡೆಸಿ ಚುನಾವಣಾಧಿಕಾರಿಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ತೆರಳಿರುವುದರಿಂದ ಚುನಾವಣೆ ನಡೆಸಲು ಆಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಮುಂದಿನ ಕ್ರಮವಹಿಸಲಾಗುವುದು ಎಂದು ಮನವೊಲಿಸಲು ಪ್ರಯತ್ನಿಸಿದರು ಸಹ ಸದಸ್ಯರು ಇದಕ್ಕೆ ಒಪ್ಪದೆ ಸ್ಥಳದಲ್ಲೆ ಪ್ರತಿಭಟನಾ ಧರಣಿಗೆ ಮುಂದಾದರು.

ಬಳಿಕ ತಹಶೀಲ್ದಾರರು ಸಿಪಿಐ, ಪಿಎಸ್‌ಐ ಪೋಲಿಸ್ ಭದ್ರತೆಯಲ್ಲಿ ಹೊರಗೆ ಬಂದು ವಾಪಸ್ಸು ಹರಪನಹಳ್ಳಿಗೆ ತೆರಳುವ ಸಂದರ್ಭದಲ್ಲಿ ಸದಸ್ಯರು ಹಾಗೂ ಮುಖಂಡರು ನೋಟಿಸ್ ನೀಡಿದಂತೆ ಕಾನೂನು ಪ್ರಕಾರ ಚುನಾವಣೆ ಪ್ರಕ್ರಿಯೆ ಇಂದೆ ನಡೆಸುವಂತೆ ಪಟ್ಟು ಹಿಡಿದು ಅಧಿಕಾರಿಗಳ ನಡುವೆ ವಾಗ್ವಾದ ನಡೆಸಿದರು. ಇತ್ತ ಕಾಂಗ್ರೆಸ್ ಬೆಂಬಲಿತ ಸದಸ್ಯರು ಚುನಾವಣಾ ಸಭಾಂಗಣದಿಂದ ಹೊರ ನಡೆದರು. ಬಳಿಕ ಬಿಜೆಪಿ ಬೆಂಬಲಿತ 11 ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಪಂ ಎದುರು ಪ್ರತಿಭಟನಾ ಧರಣಿ ನಡೆಸಿ, ಅಧಿಕಾರಿಗಳ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ಬಿಜೆಪಿ ಬೆಂಬಲಿತ ಸದಸ್ಯರು ಮಾತನಾಡಿ ಆ. 2ರಂದು ಚುನಾವಣೆ ನಿಗದಿಯಾಗಿತ್ತು, ಆ ಪ್ರಕಾರ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿದ್ದೇವು. ಆದರೆ ಫಲಿತಾಂಶ ಗೊಂದಲದಿಂದಾಗಿ ಚುನಾವಣಾಧಿಕಾರಿ ಚುನಾವಣೆ ಮತ್ತೆ ಮುಂದೂಡಿದ್ದರು. ಇಂದು ಸಹ ಅನಾರೋಗ್ಯ ನೆಪ ಹೇಳಿ ಚುನಾವಣೆ ನಡೆಸದೆ, ರಾಜಕೀಯ ಒತ್ತಡಕ್ಕೆ ಮಣಿದು ಚುನಾವಣೆ ಮುಂದೂಡಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳು ಆಗಮಿಸುವವರೆಗೂ ಅಹೋರಾತ್ರಿ ಧರಣಿ ನಡೆಸಲು ಮುಂದಾದರು.

ಈ ಸಂದರ್ಭದಲ್ಲಿ ಸಿಪಿಐ ನಾಗರಾಜ ಎಂ ಕಮ್ಮಾರ, ಪಿಎಸ್‌ಐ ಎಸ್.ಸಿ.ಹಿರೇಮಠ್, ಹಾಗೂ ಪೋಲಿಸ್ ಸಿಬ್ಬಂಧಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಜ್ಯೋತಿನಾಯ್ಕ, ಕೆ.ಆನಂದ, ವೈ.ಮಂಜುನಾಥ, ಭೋವಿ ಮಂಜುನಾಥ, ಸರಿತಾ, ಹನುಮಕ್ಕ, ರುಕ್ಮಣಿ, ಗೋಣೆಪ್ಪ, ರತ್ನಮ್ಮ, ಮಾಲಾಶ್ರೀ, ನೇತ್ರಾವತಿ, ಲಕ್ಷö್ಮಮ್ಮ, ಮುಖಂಡರಾದ ಲಿಂಬ್ಯನಾಯ್ಕ, ಮಂಜ್ಯನಾಯ್ಕ, ಸೇರಿದಂತೆ ಇತರರು ಇದ್ದರು.

Published On – 7:56 pm, Mon, 7 August 23

ತಾಜಾ ಸುದ್ದಿ

Leave A Reply

Your email address will not be published.