EBM News Kannada
Leading News Portal in Kannada

ಚಿತ್ರದುರ್ಗ: ಕಲುಷಿತ ನೀರಿನ ಆತಂಕ, ಕವಾಡಿಗರಹಟ್ಟಿ ಗ್ರಾಮ ಖಾಲಿ ಖಾಲಿ – Kannada News | Chitradurga city Death due to consumption of contaminated water in Kavadigarahatti People lefts village

0


ಕೋಟೆನಾಡು ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ದೊಡ್ಡ ದುರಂತವೇ ನಡೆದು ಹೋಗಿದೆ. ಐವರು ಸಾವಿಗೀಡಾಗಿದ್ದು ಓರ್ವ ಗರ್ಭಿಣಿಗೆ ಗರ್ಭಪಾತವೇ ಆಗಿದೆ. ಇನ್ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.

ಚಿತ್ರದುರ್ಗ: ಕಲುಷಿತ ನೀರಿನ ಆತಂಕ, ಕವಾಡಿಗರಹಟ್ಟಿ ಗ್ರಾಮ ಖಾಲಿ ಖಾಲಿ

ಜನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿರುವ ಚಿತ್ರದುರ್ಗದ ಕವಾಡಿಗರಹಟ್ಟಿ ಗ್ರಾಮ

ಚಿತ್ರದುರ್ಗ, ಆಗಸ್ಟ್ 7: ಕೋಟೆನಾಡು ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಐವರು ಸಾವಿಗೀಡಾಗಿದ್ದು ಓರ್ವ ಗರ್ಭಿಣಿಗೆ ಗರ್ಭಪಾತವಾಗಿದ್ದು, ಇನ್ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಭೀತಿಗೊಂಡ ಜನರು ಗ್ರಾಮ ತೊರೆದಿದ್ದಾರೆ.

ಕವಾಡಿಗರಹಟ್ಟಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಗೆ ಸೇರುತ್ತದೆಯಾದರೂ ಇದೊಂದು ಪುಟ್ಟ ಹಳ್ಳಿ ಎಂದೇ ಹೇಳಬಹುದು. ಆಗಸ್ಟ್ 1 ರಿಂದ ಈ ಗ್ರಾಮದಲ್ಲಿ ಮರಣ ಮೃದಂಗವೇ ಬಾರಿಸಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಇನ್ನೂರಕ್ಕೂ ಹೆಚ್ಚು ಜನರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಐವರು ಸಾವಿಗೀಡಾಗಿದ್ದು ಓರ್ವ ಗರ್ಭಿಣಿಗೆ ಗರ್ಭಪಾತವೂ ಆಗಿದೆ. ಹೀಗಾಗಿ, ಬಡಾವಣೆಯ ಜನರಲ್ಲಿ ಸಹಜವಾಗಿಯೇ ಆತಂಕ ಮೂಡಿದೆ.

ಕಲುಷಿತ ನೀರಿನಿಂದಲೇ ಕಾಲರಾ ಮಾದರಿ ರೋಗ ಹರಡಿದೆ ಎಂಬುದಾಗಿ ಸರ್ವೇಕ್ಷಣಾ ಇಲಾಖೆ ವರದಿಯೇನೋ ನೀಡಿದೆ. ಆದರೆ, ಇನ್ನಿತರೆ ಎಫ್​ಎಸ್​ಎಲ್​ ವರದಿ, ಮರಣೋತ್ತರ ವರದಿ, ತಜ್ಞರ ತಂಡದ ವರದಿ ಬರಲು ಬಾಕಿಯಿದೆ. ಅಷ್ಟೇ ಅಲ್ಲದೆ, ದ್ವೇಷದ ಹಿನ್ನೆಲೆ ನೀರಿನ ಟ್ಯಾಂಕಿಗೆ ವಿಷ ಬೆರೆಸಲಾಗಿದೆ ಎಂಬ ಅನುಮಾನವೂ ಜನರಲ್ಲಿದ್ದು ಅನೇಕರಲ್ಲಿ ಇನ್ನೂ ಭೀತಿ ಮನೆ ಮಾಡಿದೆ.

ಸ್ಪಷ್ಟ ಮಾಹಿತಿಯಿಲ್ಲದೆ ಅನೇಕರು ಮಕ್ಕಳು, ಗರ್ಭಿಣಿಯರನ್ನು ಸಂಬಂದಿಕರ ಮನೆಗೆ ಕಳುಹಿಸಿದ್ದು ಊರಿಗೆ ಊರು ಖಾಲಿ ಖಾಲಿ ಆಗಿದೆ. ಊಟ ಮಾಡಲೂ ಭಯ, ನೀರು ಕುಡಿಯಲು ಸಹ ಭಯ ಆಗುತ್ತಿದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.

ಇನ್ನು ಕವಾಡಿಗರಹಟ್ಟಿಯ ಹಳೇಹಟ್ಟಿಯಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ, ಇದೇ ಟ್ಯಾಂಕಿನಿಂದ ನೀರು ಸರಬರಾಜು ಆಗುವ ಹೊಸಹಟ್ಟಿ, ಲಿಂಗಾಯತರ ಕಾಲೋನಿ ಜನರಿಗೆ ಮಾತ್ರ ಯಾವುದೇ ಸಮಸ್ಯೆ ಆಗಿಲ್ಲದೇ ಇರುವುದು ಇಲ್ಲಿನ ಜನರಲ್ಲಿ ಭೀತಿ ಸೃಷ್ಠಿಸಿದೆ. ವಿಷ ಬೆರೆಸಿದ್ದೇ ಇಷ್ಟಕ್ಕೆಲ್ಲಾ ಕಾರಣವೆಂಬ ಅಂಶ ಜನರಲ್ಲಿ ಬೇರೂರಿದ್ದು ಆತಂಕ ಹುಟ್ಟಿಸಿದೆ. ಅಂತೆಯೇ ಗರ್ಭಿಣಿ ಉಷಾಗೆ ಗರ್ಭಪಾತ ಆಗಿರುವ ಸುದ್ದಿ ಗರ್ಭಿಣಿಯರು ಮತ್ತು ಬಾಣಂತಿರನ್ನು ಬೆಚ್ಚಿ ಬೀಳಿಸಿದೆ.

ಒಟ್ಟಾರೆಯಾಗಿ ಸರ್ಕಾರ ಮತ್ತು ಜಿಲ್ಲಾಡಳಿತವು ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಘಟನೆಗೆ ಕಾರಣವೇನೆಂಬ ಸ್ಪಷ್ಟ ಮಾಹಿತಿ ನೀಡುವ ಮೂಲಕ ಜನರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ.

ತಾಜಾ ಸುದ್ದಿ

Leave A Reply

Your email address will not be published.