ಅಲೆ ಬುಡಿಯೆರ್.. ಬೆಂಗಳೂರಿನಲ್ಲಿ ಕೋಣಗಳ ಗತ್ತಿನ ಓಟದ ಕಂಬಳ ಕ್ರೀಡೆ ಆಯೋಜನೆಗೆ ಪ್ಲಾನ್ – Kannada News | Race of buffalo coastal famous sport Kambala is planned to be held in Bengaluru
ಕರಾವಳಿ ಭಾಗದ ಪ್ರಸಿದ್ಧ ಕ್ರೀಡೆ ಕಂಬಳ ವಿದೇಶಗಳಲ್ಲೂ ಸುದ್ದು ಮಾಡಿತ್ತು. ಈ ಕ್ರೀಡೆಯಲ್ಲಿ ಕೋಣಗಳ ಗತ್ತಿನ ಓಟ ನೋಡಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ. ಇದೀಗ ಈ ಕ್ರೀಡೆ, ಬೆಂಗಳೂರಿನಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ.

ಕರಾವಳಿಯ ಪ್ರಸಿದ್ಧ ಕ್ರೀಡೆ ಕಂಬಳ ಬೆಂಗಳೂರಿನಲ್ಲಿ ಆಯೋಜನೆಗೆ ಪ್ಲಾನ್
ಮಂಗಳೂರು, ಆಗಸ್ಟ್ 7: ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು (Kambala) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಯೋಜನೆ ಮಾಡಲು ಯೋಜನೆ ರೂಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆಯುವ ವಿಜಯ ವಿಕ್ರಮ ಜೋಡುಕೆರೆ ಕಂಬಳದ ರೂವಾರಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ (Ashok Rai) ಅವರ ನೇತ್ರತ್ವದಲ್ಲಿ ಈ ಕಂಬಳ ನಡೆಸಲು ಸಿದ್ದತೆಗಳು ನಡೆಯುತ್ತಿದೆ.
ಕರಾವಳಿಯ ಜನಪದ ಕ್ರೀಡೆ ಕಂಬಳ ಇತ್ತೀಚೆಗೆ ಸಾಕಷ್ಟು ಪ್ರಸಿದ್ದಿ ಪಡೆಯುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುವ ಕಂಬಳವನ್ನು ವೀಕ್ಷಿಸಲೆಂದು ಲಕ್ಷಾಂತರ ಜನ ಆಗಮಿಸುತ್ತಾರೆ. ಅದರಲ್ಲೂ ಕಾಂತಾರ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಕಂಬಳ ದೃಶ್ಯದ ಚಿತ್ರೀಕರಣವಾದ ಬಳಿಕ ಕಂಬಳ ಕ್ರೇಝ್ ಹೆಚ್ಚಿನವರಲ್ಲಿ ಮೂಡಿದೆ. ಹೀಗಾಗಿ ಕರಾವಳಿಯಲ್ಲಿ ಮಾತ್ರ ನಡೆಯುತ್ತಿದ್ದ ಈ ಕಂಬಳವನ್ನು ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಆಯೋಜನೆ ಮಾಡುವ ಸಿದ್ಧತೆಗಳು ನಡೆಯುತ್ತಿದೆ.
ಉದ್ಯೋಗ ಸೇರಿದಂತೆ ಇನ್ನಿತರ ಕಾರಣಕ್ಕಾಗಿ ಸಾಕಷ್ಟು ಮಂದಿ ಕರಾವಳಿಗರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಪ್ರಾರಂಭಿಸಿರುವಂತಹ ತುಳುಕೂಟ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಪ್ರಯುಕ್ತ ಕಂಬಳ ಆಯೋಜನೆಗೆ ನಿರ್ಧರಿಸಲಾಗಿದೆ. ಉಪ್ಪಿನಂಗಡಿಯಲ್ಲಿ ನಡೆಯುವ ವಿಜಯ ವಿಕ್ರಮ ಜೋಡುಕೆರೆ ಕಂಬಳದ ರೂವಾರಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತ್ರತ್ವದಲ್ಲಿ ಈ ಕಂಬಳ ನಡೆಯಲಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಕಂಬಳದ ದಿನಾಂಕ ನಿಗದಿ ಮಾಡಬೇಕಾಗಿದೆ. ಕಾರ್ಯಕ್ರಮ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ನೇತ್ರತ್ವದಲ್ಲಿ ಅರಮನೆ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ಕಂಬಳ ಆಯೋಜನೆ ಮಾಡಲು ಹಲವು ಸವಾಲಿದ್ದು ಕೋಣಗಳನ್ನು ಓಡಿಸಲು ಭೂಮಿಯನ್ನು ವಿಶೇಷವಾಗಿ ಸಿದ್ಧಗೊಳಿಸಬೇಕು. ಕೋಣಗಳನ್ನು ಓಡಿಸುವ ಟ್ರ್ಯಾಕ್ ನಿರ್ಮಾಣ, ಕೋಣಗಳನ್ನು ಕರೆತಂದು ನಿಲ್ಲಿಸಲು ವ್ಯವಸ್ಥೆ ಹೀಗೆ ಅನೇಕ ಸಿದ್ಧತೆಗಳು ಆಗಬೇಕಿದೆ. ಹೀಗಾಗಿ ಅರಮನೆ ಮೈದಾನದಲ್ಲಿ ಕಂಬಳ ಅಂಕಣ, ನೀರು, ಪಾರ್ಕಿಂಗ್‌ಗೆ ವ್ಯವಸ್ಥೆ, ಪ್ರೇಕ್ಷಕರಿಗೆ ಕಂಬಳ ವೀಕ್ಷಿಸಲು ಬೇಕಾದಷ್ಟು ಜಾಗದ ವ್ಯವಸ್ಥೆ ಸೇರಿದಂತೆ ಎಲ್ಲದರ ಬಗ್ಗೆಯು ಪರಿಶೀಲನೆ ನಡೆಸಲಾಗಿದೆ.
ಕರಾವಳಿಯಲ್ಲಿ ಕಂಬಳ ರುತು ಪ್ರಾರಂಭವಾಗುವ ಮೊದಲೇ ಬೆಂಗಳೂರಿನಲ್ಲಿ ಕಂಬಳ ನಡೆಸುವುದಕ್ಕೆ ಸಿದ್ಧತೆ ಮಾಡಲಾಗಿದೆ. ಇದರ ಜೊತೆ ಈ ಬೆಂಗಳೂರು ಕಂಬಳಕ್ಕೆ ಯಾವ ಕೋಣಗಳನ್ನು ಆಯ್ಕೆ ಮಾಡಬೇಕು, ಅವುಗಳನ್ನು ಊರಿನಿಂದ ರಾಜ್ಯ ರಾಜಧಾನಿಗೆ ಕರೆ ತರುವುದು ಹೇಗೆ ಎಂಬ ನಿಟ್ಟಿನಲ್ಲಿಯೂ ಚರ್ಚೆ ನಡೆಯುತ್ತಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾದಲ್ಲಿ ನಗರದಲ್ಲಿರುವ ಕರಾವಳಿಗರಿಗೆ ಮಾತ್ರವಲ್ಲದೆ, ಉಳಿದವರಿಗೂ ಕೋಣಗಳ ಗತ್ತಿನ ಓಟವನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ಒದಗಿ ಬರಲಿದೆ.
Published On – 7:44 pm, Mon, 7 August 23