ಚಿಕ್ಕಬಳ್ಳಾಪುರ: ಹೊಸ ರೂಪದೊಂದಿಗೆ ಕಾರ್ಯಾಚರಣೆಗೆ ಇಳಿದ ಹಳೆ ಕೆಎಸ್ಆರ್ಸಿಟಿ ಬಸ್ಗಳು – Kannada News | Old KSRTC buses start operations with new look at Chikkaballapur and Kolar
ಹಳೆ ಕೆಎಸ್ಆರ್ಟಿಸಿ ಬಸ್ಗಳನ್ನು ನವೀಕರಿಸುವ ಕಾರ್ಯ ಕೆಲವು ತಿಂಗಳ ಹಿಂದೆ ಆರಂಭವಾಗಿತ್ತು. ಅದರಂತೆ ಕೆಲವು ಬಸ್ಗಳು ಹೊಸ ರೂಪ ಪಡೆದು ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಕಾರ್ಯಾಚರಣೆಗೆ ಇಳಿದಿವೆ.
ಹೊಸ ರೂಪದೊಂದಿಗೆ ಕಾರ್ಯಾಚರಣೆಗೆ ಇಳಿದ ಹಳೆ ಕೆಎಸ್ಆರ್ಸಿಟಿ ಬಸ್ಗಳು
ಕೋಲಾರ/ ಚಿಕ್ಕಬಳ್ಳಾಪುರ, ಆಗಸ್ಟ್ 7: ಹಳೆ ಕೆಎಸ್ಆರ್ಟಿಸಿ (KSRTC) ಬಸ್ಗಳು ಹೊಸ ರೂಪದೊಂದಿಗೆ ಕಾರ್ಯಾಚರಣೆ ಆರಂಭಿಸಿವೆ. ಬೆಂಗಳೂರಿನ (Bengaluru) ಕೆಂಗೇರಿಯಲ್ಲಿರುವ ಪ್ರಾದೇಶಿಕ ಕಾರ್ಯಾಗಾರದಲ್ಲಿ ನವೀಕರಿಸಿದ ಸುಮಾರು 45 ಬಸ್ಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿಕ್ಕಬಳ್ಳಾಪುರ (Chikkaballapur) ಮತ್ತು ಕೋಲಾರ (Kolar) ವಿಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
ಕೆಎಸ್ಆರ್ಟಿಸಿ ಚಿಕ್ಕಬಳ್ಳಾಪುರ ವಿಭಾಗದ ಮೂಲಗಳ ಪ್ರಕಾರ, ವಿಭಾಗಕ್ಕೆ ಸೇರಿದ ವಿವಿಧ ಡಿಪೋಗಳಲ್ಲಿ 14 ನವೀಕರಿಸಿದ ಬಸ್ಸುಗಳನ್ನು ಬಳಸಲಾಗುತ್ತಿದೆ. ಕೋಲಾರದಲ್ಲಿ ಒಟ್ಟು 20 ನವೀಕರಿಸಿದ ಬಸ್ಸುಗಳನ್ನು ಸೇವೆಗೆ ಬಳಸಲಾಗುತ್ತಿದೆ.
ಸಾಮಾನ್ಯವಾಗಿ, ಒಂಬತ್ತು ಲಕ್ಷ ಕಿಲೋಮೀಟರ್ಗಿಂತ ಹೆಚ್ಚು ಚಲಿಸಿದ ಬಸ್ಸುಗಳನ್ನು ಗುಜರಿ ಬಸ್ಗಳೆಂದು ಪರಿಗಣಿಸಲಾಗುತ್ತದೆ. ಆದರೆ, ಶಕ್ತಿ ಯೋಜನೆ ಜಾರಿ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆ ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಬಸ್ಗಳ ಖರೀದಿ ಬದಲು ಹಳೇ ಬಸ್ಸುಗಳನ್ನು ನವೀಕರಿಸಲು ಕೆಎಸ್ಆರ್ಟಿಸಿ ನಿರ್ಧರಿಸಿತ್ತು.
ನವೀಕರಿಸಿದ ಬಸ್ಗಳ ಬಗ್ಗೆ ಮಾತನಾಡಿದ ಚಿಕ್ಕಬಳ್ಳಾಪುರದ ಕೆಎಸ್ಆರ್ಟಿಸಿ ಪ್ರಭಾರ ಡಿಪೋ ಮ್ಯಾನೇಜರ್ ಶಿಲ್ಪಾ, ನವೀಕರಿಸಿದ ಬಸ್ಗಳನ್ನು ಇನ್ನೂ ಒಂದೂವರೆಯಿಂದ ಎರಡು ಲಕ್ಷ ಕಿಲೋಮೀಟರ್ ವರೆಗೆ ಓಡಿಸಬಹುದು. ಅಂತಹ ಆರು ಬಸ್ಸುಗಳನ್ನು ಚಿಕ್ಕಬಳ್ಳಾಪುರ ಡಿಪೋವೇ ನಿರ್ವಹಿಸುತ್ತಿದೆ ಎಂದು ಹೇಳಿದರು.