ಮುಂಬೈ | ‘ಪುಷ್ಪ 2’ ಪ್ರದರ್ಶನದ ವೇಳೆ ಥಿಯೇಟರ್ ನಲ್ಲಿ ಅಪರಿಚಿತರಿಂದ ʼಸ್ಪ್ರೇʼ: ಕೆಮ್ಮು, ಗಂಟಲು ನೋವಿನಿಂದ ಬಳಲಿದ ಸಿನಿಮಾ ವೀಕ್ಷಕರು
ಮುಂಬೈ: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2: ದಿ ರೂಲ್’ ಚಿತ್ರ ಪ್ರದರ್ಶನದ ವೇಳೆ ಮುಂಬೈನ ಗೈಟಿ ಗ್ಯಾಲಕ್ಸಿ ಥಿಯೇಟರ್ ನಲ್ಲಿ ಯಾರೋ ಅಪರಿಚಿತರು ಸ್ಪ್ರೇ ಬಳಕೆ ಮಾಡಿದ ಕಾರಣ ಸಿನಿಮಾ ವೀಕ್ಷಿಸುತ್ತಿದ್ದ ಜನರು ಕೆಮ್ಮು, ಗಂಟಲು ನೋವು ಸೇರಿದಂತೆ ಆರೋಗ್ಯ ಸಮಸ್ಯೆಗಳಿಂದ ಬಳಲಿದ್ದು, ಚಿತ್ರ ಪ್ರದರ್ಶನವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಈ ಕುರಿತು ವೀಡಿಯೊ ವೈರಲ್ ಆಗಿದ್ದು, ಬಾಂದ್ರಾದ ಗೈಟಿ ಗ್ಯಾಲಕ್ಸಿ ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದವರು ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಿರುವುದು, ʼ ಯಾರೋ ಏನೋ ಸ್ಪ್ರೇ ಮಾಡಿದ್ದಾರೆ ಮತ್ತು ಎಲ್ಲರೂ ಕೆಮ್ಮುತ್ತಿದ್ದಾರೆʼ ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.
ಘಟನೆ ಬೆನ್ನಲ್ಲೇ ಪೊಲೀಸರು ಥಿಯೇಟರ್ ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಕುರಿತು ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ‘ಪುಷ್ಪಾ’ ಪ್ರೀಮಿಯರ್ ಶೋ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯೋರ್ವರು ಮೃತಪಟ್ಟಿದ್ದು, ಆಕೆಯ ಪುತ್ರ ಗಾಯಗೊಂಡಿದ್ದರು.