ಹೊಸದಿಲ್ಲಿ: ʼಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ ಅಂಡ್ ಸೈನ್ಸಸ್ʼ 2024ರ ಇಂಟರ್ ನ್ಯಾಷನಲ್ Emmy Award (ಎಮ್ಮಿ ಪ್ರಶಸ್ತಿ) ಪ್ರಧಾನ ಸಮಾರಂಭದ ನಿರೂಪಕರಾಗಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ನಟ ವೀರ್ ದಾಸ್ ಅವರನ್ನು ಘೋಷಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ನ.25ರಂದು ನ್ಯೂಯಾರ್ಕ್ ನಗರದಲ್ಲಿ ನಡೆಯಲಿದೆ. ಈ ಹಿಂದೆ 2021ರಲ್ಲಿ ಕಾಮಿಡಿ ವಿಭಾಗದಲ್ಲಿ ಇಂಟರ್ ನ್ಯಾಷನಲ್ Emmy Awardಗೆ ನಾಮನಿರ್ದೇಶನಗೊಂಡಿದ್ದರು. 2023ರಲ್ಲಿ ತಮ್ಮ ನೆಟ್‌ಫ್ಲಿಕ್ಸ್ ಕಾಮಿಡಿ ಸ್ಪೆಷಲ್ ಗಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಇದೀಗ Emmy ವೇದಿಕೆಗೆ ಮತ್ತೆ ಅವರಿಗೆ ಅವಕಾಶ ಸಿಕ್ಕಿದೆ. ಅವರು ಪ್ರತಿಷ್ಠಿತ ಸಮಾರಂಭವನ್ನು ನಿರೂಪಣೆ ಮಾಡಲು ಅವಕಾಶ ಸಿಕ್ಕ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ವೀರ್ ದಾಸ್ ಅವರನ್ನು ನಮ್ಮ ವೇದಿಕೆಗೆ ಮರಳಿ ಸ್ವಾಗತಿಸಲು ಮತ್ತು ಅವರ ಸಾಧನೆಯ ಪಟ್ಟಿಗೆ Emmy ಕಾರ್ಯಕ್ರಮದ ನಿರೂಪಣೆಯನ್ನು ಸೇರಿಸಲು ನಾವು ಬಯಸುತ್ತೇವೆ ಎಂದು ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ ಆಂಡ್ ಸೈನ್ಸಸ್ ಅಧ್ಯಕ್ಷ ಮತ್ತು ಸಿಇಒ ಬ್ರೂಸ್ ಎಲ್ ಪೈಸ್ನರ್ ಹೇಳಿದ್ದಾರೆ.
ಈ ಬಗ್ಗೆ ಧನ್ಯವಾದ ಅರ್ಪಿಸಿ ವೀರ್ ದಾಸ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು, ಓರ್ವ ಭಾರತೀಯ ನಿರೂಪಕನಾಗಿ ನಾನು ಕಾರ್ಯಕ್ರಮದ ನಿರೂಪಣೆಗೆ ಆತುರದಿಂದಿದ್ದೇನೆ. ಇದು ಅದ್ಭುತವಾದ ಗೌರವ ಮತ್ತು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.