ಮುಂಬೈ: ಬುಧವಾರ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ತಮ್ಮ ತಂದೆ ಅನಿಲ್ ಕುಲ್ ದೀಪ್ ಮೆಹ್ತಾರ ಸಾವಿನ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ನಟಿ ಮಲೈಕಾ ಅರೋರ, ಈ ಘಟನೆಯಿಂದ ನಮ್ಮ ಕುಟುಂಬವು ತೀವ್ರ ಆಘಾತಕ್ಕೀಡಾಗಿದೆ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಮಲೈಕಾ ಅರೋರ ಮಾಡಿರುವ ಪೋಸ್ಟ್ ನಲ್ಲಿ, “ನಮ್ಮ ತಂದೆ ಅನಿಲ್ ಮೆಹ್ತಾ ನಿಧನರಾದ ಕುರಿತು ಪ್ರಕಟಿಸಲು ನಮಗೆ ತೀವ್ರ ದುಃಖವಾಗುತ್ತಿದೆ. ಅವರೊಬ್ಬ ಸಂಭಾವಿತ ವ್ಯಕ್ತಿಯಾಗಿದ್ದರು. ನಮ್ಮ ಅತ್ಯುತ್ತಮ ಸ್ನೇಹಿತನಾಗಿದ್ದರು. ಈ ನಷ್ಟದಿಂದ ನಮ್ಮ ಕುಟುಂಬವು ತೀವ್ರ ಆಘಾತಕ್ಕೀಡಾಗಿದ್ದು, ಈ ಕಠಿಣ ಸಮಯದಲ್ಲಿ ನಾವು ಮಾಧ್ಯಮ ಹಾಗೂ ಹಿತೈಷಿಗಳಿಂದ ಖಾಸಗಿತನವನ್ನು ಬಯಸುತ್ತೇವೆ. ನಾವು ನಿಮ್ಮ ಮನವರಿಕೆ, ಬೆಂಬಲ ಹಾಗೂ ಗೌರವವನ್ನು ಅಭಿನಂದಿಸುತ್ತೇವೆ” ಎಂದು ಅವರ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.
65 ವರ್ಷದ ಮೆಹ್ತಾ ಅವರು ತಾವು ಬಾಂದ್ರಾದಲ್ಲಿನ ಅಯೇಷಾ ಮ್ಯಾನರ್ ನಲ್ಲಿರುವ ಆರನೆ ಅಂತಸ್ತಿನ ತಮ್ಮ ನಿವಾಸದಿಂದ ಕೆಳಕ್ಕೆ ಜಿಗಿಯುವುದಕ್ಕೂ ಮುನ್ನ ತಮ್ಮಿಬ್ಬರು ಪುತ್ರಿಯರಿಗೆ ಕರೆ ಮಾಡಿದ್ದರು ಹಾಗೂ ನಾನು ದಣಿದಿದ್ದೇನೆ ಎಂದು ಹೇಳಿಕೊಂಡಿದ್ದರು ಎಂಬ ವರದಿಗಳು ಬೆಳಕಿಗೆ ಬಂದಿವೆ. ಮೆಹ್ತಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಮೆಹ್ತಾರ ಮರಣೋತ್ತರ ಪರೀಕ್ಷೆಯನ್ನು ಭಾಭಾ ಆಸ್ಪತ್ರೆಯಲ್ಲಿ ನೆರವೇರಿಸಲಾಯಿತು.