ಕೇರಳ: ತನ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ಸಿದ್ದೀಕ್ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಮಲಯಾಳಂ ನಟ ಸಿದ್ದಿಕ್ ವಿರುದ್ಧ ಆ. 27ರಂದು ತಿರುವನಂತಪುರಂನಲ್ಲಿರುವ ಮ್ಯೂಸಿಯಂ ಪೊಲೀಸರು ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದಕ್ಕೂ ಮೊದಲು ನಟಿಯೋರ್ವರು ನಟ ಸಿದ್ದೀಕ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. 2016ರಲ್ಲಿ ಚಲನಚಿತ್ರದ ಪ್ರೀಮಿಯರ್ ಸಮಯದಲ್ಲಿ ಸಿದ್ದಿಕ್ ಅವರನ್ನು ಭೇಟಿಯಾಗಿದ್ದೆ, ಅವರು ತಮ್ಮ ಮಗನೊಂದಿಗೆ ನಟಿಸಲು ಅವಕಾಶ ನೀಡುವ ಬಗ್ಗೆ ಮಾತನಾಡಲು ಹೋಟೆಲ್‌ಗೆ ನನ್ನನ್ನು ಕರೆದಿದ್ದರು. ಅವರು ನನ್ನನ್ನು ಮಗಳೇ ಎಂದು ಕರೆದಿದ್ದರು. ಆದ್ದರಿಂದ ಅವರ ಆಹ್ವಾನದ ಹಿಂದಿನ ಉದ್ದೇಶವನ್ನು ನಾನು ಅರ್ಥೈಸಿಕೊಂಡಿರಲಿಲ್ಲ. ಆದರೆ, ಅಂತಹ ಸಿನಿಮಾವೇ ಇರಲಿಲ್ಲ. ಅದೊಂದು ಟ್ರ್ಯಾಪ್ ಆಗಿತ್ತು. ಅವರು ನನಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅವರು ಇವತ್ತು ಹೇಳುವುದೆಲ್ಲ ಬರೀ ಸುಳ್ಳಾಗಿದೆ. ಅವರು ನನ್ನ ಒಪ್ಪಿಗೆಯಿಲ್ಲದೆ ನನ್ನನ್ನು ಸ್ಪರ್ಷಿಸಿದ್ದಾರೆ ಮತ್ತು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅವರಿಂದಾಗಿ ನಾನು ಸಾಕಷ್ಟು ಮಾನಸಿಕ ನೋವನ್ನು ಅನುಭವಿಸಿದ್ದೇನೆ, ಇದು ಯಾರಿಗೂ ಆಗಬಾರದು ಎಂದು ಹೇಳಿದ್ದರು.
ನಟಿಯ ಈ ಆರೋಪವನ್ನು ಸಿದ್ದೀಕ್ ನಿರಾಕರಿಸಿದ್ದಾರೆ. ಆರೋಪಗಳ ನಂತರ ಅವರು ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಬೆನ್ನಲ್ಲಿ ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದರು.
ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಮಲಯಾಳಂ ಚಿತ್ರರಂಗದಲ್ಲಿನ ಲೈಂಗಿಕ ಕಿರುಕುಳದ ಬಗ್ಗೆ ಬೆಳಕನ್ನು ಚೆಲ್ಲಿತ್ತು, ವರದಿ ಬಹಿರಂಗದ ಬಳಿಕ ಅನೇಕ ನಟಿಯರು ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದರು.