ಹೊಸದಿಲ್ಲಿ: ವೆಬ್ ಸಿರೀಸ್ ʼIC 814 ಕಂದಹಾರ್ ಹೈಜಾಕ್ʼ ಬಹಿಷ್ಕರಿಸುವಂತೆ ಬಲಪಂಥೀಯರಿಂದ ಕೂಗು ಹೆಚ್ಚಾಗುತ್ತಿರುವ ಮಧ್ಯೆ ನೆಟ್ ಫ್ಲಿಕ್ಸ್ ಇಂಡಿಯಾದ ಮುಖ್ಯಸ್ಥರಿಗೆ ಸರಕಾರವು ಸಮನ್ಸ್ ನೀಡಿದೆ ಎಂದು ತಿಳಿದು ಬಂದಿದೆ.
ʼIC814 ಕಂದಹಾರ್ ಹೈಜಾಕ್ʼ ಬಗ್ಗೆ ಪ್ರತಿಕ್ರಿಯಿಸಿರುವ ನಟಿ, ಸಂಸದೆ ಕಂಗನಾ ರಣಾವತ್, ನಿರ್ದೇಶಕ ಅನುಭವ್ ಸಿನ್ಹಾ ಅವರು ವೆಬ್ ಸರಣಿಯಲ್ಲಿ ಡಿಸೆಂಬರ್ 1999 ರ ವಿಮಾನ ಅಪಹರಣದ ಸತ್ಯಗಳನ್ನು ಬದಲಾಯಿಸಿದ್ದಾರೆ ಎಂದರು.
ಕಂಗನಾ ಅವರು ಈ ಸರಣಿಯು ಅಪಹರಣಕಾರರ ಮುಸ್ಲಿಂ ಹೆಸರುಗಳನ್ನು ಮುಸ್ಲಿಮೇತರ ಹೆಸರುಗಳನ್ನಾಗಿ ಬದಲಾಯಿಸಿದೆ ಎಂದು ಆರೋಪಿಸಿರುವ ಬಿಜೆಪಿ ಐಟಿ ಸೆಲ್ ನ ನಾಯಕ ಅಮಿತ್ ಮಾಳವಿಯಾ ಅವರ ಪೋಸ್ಟ್ ಅನ್ನು ನಟಿ ಹಂಚಿಕೊಂಡಿದ್ದಾರೆ.
“IC-814 ರ ಅಪಹರಣಕಾರರು ಭಯೋತ್ಪಾದಕರು, ಅವರು ತಮ್ಮ ಮುಸ್ಲಿಂ ಗುರುತನ್ನು ಮರೆಮಾಡಲು ಬೇರೆ ಹೆಸರುಗಳನ್ನು ಬಳಸಿದರು. ಚಲನಚಿತ್ರ ನಿರ್ದೇಶಕ ಅನುಭವ್ ಸಿನ್ಹಾ, ಅವರ ಮುಸ್ಲಿಮೇತರ ಹೆಸರುಗಳನ್ನು ಬಳಸಿದ್ದಾರೆ. ದಶಕಗಳ ನಂತರ, ವೆಬ್ ಸರಣಿ ನೋಡುವವರು IC-814 ಅನ್ನು ಹಿಂದೂಗಳೇ ಅಪಹರಿಸಿದ್ದಾರೆ ಎಂದು ಭಾವಿಸುತ್ತಾರೆ. ಇದು ಪಾಕಿಸ್ತಾನಿ ಭಯೋತ್ಪಾದಕರ ಅಪರಾಧಗಳನ್ನು ಬದಲಾಯಿಸಲು ಎಡಪಕ್ಷಗಳ ಕಾರ್ಯಸೂಚಿ. 70ರ ದಶಕದಿಂದಲೂ ಕಮ್ಯುನಿಸ್ಟರು ಸಿನಿಮಾಗಳನ್ನು ಈ ರೀತಿಯಾಗಿ ಬಳಸುತ್ತಿದ್ದಾರೆ”, ಎಂದು ಮಾಳವಿಯಾ ಪೋಸ್ಟ್ ಮಾಡಿದ್ದಾರೆ.