ಹೊಸದಿಲ್ಲಿ: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಛೇದನಗೊಳ್ಳಲಿದ್ದಾರೆ ಎಂಬ ವದಂತಿಗಳು ಹರಡಿರುವ ನಡುವೆಯೇ, ಈ ಕುರಿತು ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದು, “ನಾನೀಗಲೂ ವಿವಾಹಿತ” ಎಂದು ಹೇಳಿಕೊಳ್ಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Bollywood UK Media ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, “ನಾನೀಗಲೂ ವಿವಾಹಿತ. ಈ ಕುರಿತು ನಾನು ಹೆಚ್ಚೇನನ್ನೂ ಹೇಳಲು ಬಯಸುವುದಿಲ್ಲ. ನೀವು ಈ ವಿಷಯವನ್ನು ಅತಿರಂಜಿತವಾಗಿ ವರದಿ ಮಾಡುತ್ತಿದ್ದೀರಿ. ಇದು ನಿಜಕ್ಕೂ ದುಃಖಕರ. ನೀವಿದನ್ನು ಯಾಕೆ ಮಾಡುತ್ತೀರಿ ಎಂಬುದು ನನಗೆ ತಿಳಿದಿದೆ. ನೀವು ಕೆಲವು ಸುದ್ದಿಗಳನ್ನು ನೀಡಬೇಕಾಗುತ್ತದೆ. ನಾವು ಸೆಲೆಬ್ರಿಟಿಗಳಾದ್ದರಿಂದ ಇಂತಹ ಸುದ್ದಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ” ಎಂದು ತಮ್ಮ ವಿವಾಹದ ಉಂಗುರವನ್ನು ಪ್ರದರ್ಶಿಸಿ ಹೇಳಿದ್ದಾರೆ ಎಂದು The Times Of India ವರದಿ ಮಾಡಿದೆ.
ಈ ಕುರಿತು ಇನ್ಸ್ಟಾಗ್ರಾಮ್ ನಲ್ಲೂ ಪೋಸ್ಟ್ ಮಾಡಿರುವ ಅಭಿಷೇಕ್ ಬಚ್ಚನ್, “ಕೆಲವೊಮ್ಮೆ ನಾವಂದುಕೊಂಡಂತೆ ಬದುಕು ತೆರೆದುಕೊಳ್ಳುವುದಿಲ್ಲ. ಆದರೆ, ದಶಕಗಳ ಕಾಲ ಒಟ್ಟಿಗೆ ಇದ್ದ ಜನರು ಬೇರ್ಪಟ್ಟ ನಂತರ ಹೇಗೆ ನಿಭಾಯಿಸುತ್ತಾರೆ? ತಮ್ಮ ಜೀವನದ ಮಹತ್ತರ ಭಾಗವನ್ನು ಸಣ್ಣ ಸಂಗತಿ ಹಾಗೂ ದೊಡ್ಡ ಸಂಗತಿಗಳಿಗೆಲ್ಲ ಪರಸ್ಪರ ಆಶ್ರಯಿಸುವವರು ಹೇಗೆ ತಮ್ಮ ಜೀವನ ಕಳೆಯುತ್ತಾರೆ? ಹಾಗೆ ಅವರು ಮಾಡಲು ಏನು ಕಾರಣ? ಆನಂತರ ಅವರು ಎದುರಿಸಲಿರುವ ಸವಾಲುಗಳೇನು? ಈ ಕತೆಯು ಈ ಪ್ರಶ್ನೆಗಳನ್ನೆತ್ತುತ್ತದೆ. ಕಾಕತಾಳೀಯವೆಂಬಂತೆ, 50 ವರ್ಷಗಳ ನಂತರ ವಿಚ್ಛೇದನಕ್ಕೊಳಗಾಗುತ್ತಿರುವವರು ಜಾಗತಿಕ ಮಟ್ಟದಲ್ಲಿ ಏರಿಕೆಯಾಗುತ್ತಿದ್ದಾರೆ. ಕಾರಣಗಳು ಬೇರೆ ಬೇರೆ ಇದ್ದರೂ ಅಚ್ಚರಿದಾಯಕವಾಗಿಲ್ಲ” ಎಂದು ಬರೆದುಕೊಂಡಿದ್ದಾರೆ.
2007ರಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿವಾಹವಾಗಿದ್ದರು.