ತನ್ನನ್ನು ಟರ್ಕಿಯ ಒಲಿಂಪಿಕ್ ಶೂಟರ್ ಎಂದು ತಪ್ಪಾಗಿ ಗ್ರಹಿಸಿದ್ದ ಅಭಿಮಾನಿಗೆ ನಟ ಆದಿಲ್ ಹುಸೇನ್ ಪ್ರತಿಕ್ರಿಯಿಸಿದ್ದು ಹೀಗೆ…
ಮುಂಬೈ: ಬಾಲಿವುಡ್ ನಟ ಆದಿಲ್ ಹುಸೇನ್ ತನ್ನನ್ನು ಟರ್ಕಿಯ ಶೂಟರ್ ಯೂಸುಫ್ ಡಿಕೆಚ್ ಎಂದು ತಪ್ಪಾಗಿ ಗ್ರಹಿಸಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದಕ್ಕಾಗಿ ತನ್ನನ್ನು ಹೊಗಳಿದ್ದ ಅಭಿಮಾನಿಯ ಕುರಿತು ಪೋಸ್ಟ್‌ವೊಂದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಡಿಕೆಚ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಶುಕ್ರವಾರ ಎಕ್ಸ್ ಬಳಕೆದಾರನೋರ್ವ ಡಿಕೆಚ್ ಮತ್ತು ಆದಿಲ್ ಹುಸೇನ್ ಫೋಟೊಗಳ ಕೊಲಾಜ್ ಹಂಚಿಕೊಂಡು,‘2024ರ ಒಲಿಂಪಿಕ್ಸ್‌ನಲ್ಲಿ ಟರ್ಕಿಗಾಗಿ ಬೆಳ್ಳಿ ಪದಕವನ್ನು ಜಯಿಸಿದ್ದಕ್ಕೆ ಅಭಿನಂದನೆಗಳು ಸರ್’ ಎಂದು ಬರೆದಿದ್ದ.
ಇದಕ್ಕೆ ತಮಾಷೆಯಾಗಿ ಉತ್ತರಿಸಿರುವ ಆದಿಲ್, ‘ಇದು ನಿಜವಾಗಿದ್ದರೆ ಎಂದು ಆಶಿಸುತ್ತೇನೆ, ಬಹುಶಃ ಪ್ರ್ಯಾಕ್ಟೀಸ್ ಆರಂಭಿಸಲು ಈಗಲೂ ಬಹಳ ತಡವಾಗಿಲ್ಲ’ ಎಂದು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆದಿಲ್, ‘ಸಾಮಾಜಿಕ ಮಾಧ್ಯಮ ಬಳಕೆದಾರ ಅದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದ. ಅದು ತಪ್ಪುಗ್ರಹಿಕೆಯ ಟ್ವೀಟ್ ಆಗಿತ್ತು ಎನ್ನುವುದನ್ನು ನಾನು ನಂಬುವುದಿಲ್ಲ. ಅದನ್ನು ತಮಾಷೆಗಾಗಿ ಉದ್ದೇಶಪೂರ್ವಕವಾಗಿ ಮಾಡಲಾಗಿತ್ತು. ಅದನ್ನು ನೋಡಿದಾಗ ನನಗೆ ಆಘಾತವಾಗಲಿಲ್ಲ, ಬದಲಿಗೆ ಅದು ನಿಜಕ್ಕೂ ತುಂಬ ತಮಾಷೆಯಾಗಿತ್ತು’ ಎಂದು ಹೇಳಿದರು.
ಜಾಹ್ನವಿ ಕಪೂರ್ ಮತ್ತು ಗುಲ್ಶನ್ ದೇವೈಯಾ ಜೊತೆ ಆದಿಲ್ ನಟಿಸಿರುವ ‘ಉಲಝ್’ ಹಿಂದಿ ಚಿತ್ರ ಆ.2ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡಿದೆ.