ಕೊಚ್ಚಿ: ಬಂದರು ನಗರವಾದ ಕೊಚ್ಚಿಯಲ್ಲಿ ಸಾಹಸದ ದೃಶ್ಯಿವನ್ನು ಚಿತ್ರೀಕರಿಸುತ್ತಿದ್ದಾಗ ಕಾರು ಅಪಘಾತ ಸಂಭವಿಸಿದ್ದು, ಮಲಯಾಳಂ ನಟರಾದ ಅರ್ಜುನ್ ಅಶೋಕ್ ಹಾಗೂ ಸಂಗೀತ್ ಪ್ರತಾಪ್ ಸೇರಿದಂತೆ ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಈ ಘಟನೆಯು ಇಂದು ಮುಂಜಾನೆ ಸುಮಾರು 1.30ರ ವೇಳೆಗೆ ಕೊಚ್ಚಿಯ ಎಂ.ಜಿ.ರಸ್ತೆಯಲ್ಲಿ ನಡೆದಿದೆ.
ಇನ್ನೂ ಚಿತ್ರೀಕರಣದ ಹಂತದಲ್ಲಿರುವ ‘ಬ್ರೊಮಾನ್ಸ್’ ಎಂಬ ಶೀರ್ಷಿಕೆ ಹೊಂದಿರುವ ಚಲನಚಿತ್ರದ ಚಿತ್ರೀಕರಣದ ಸಂದರ್ಭ ನಟರು ಪ್ರಯಾಣಿಸುತ್ತಿದ್ದ ಕಾರು ಹೋಟೆಲ್ ಒಂದರ ಎದುರು ನಿಲ್ಲಿಸಿದ್ದ ಎರಡು ಬೈಕ್ ಗಳಿಗೆ ಢಿಕ್ಕಿ ಹೊಡೆದು ಉರುಳಿ ಬಿದ್ದಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಅರ್ಜುನ್ ಅಶೋಕನ್, ಸಂಗೀತ್ ಪ್ರತಾಪ್ ಸೇರಿದಂತೆ ಮೂವರು ಹಾಗೂ ರಸ್ತೆ ಬದಿಯಲ್ಲಿ ನಿಂತಿದ್ದ ಫುಡ್ ಡೆಲಿವರಿ ಏಜೆಂಟ್ ಒಬ್ಬರಿಗೆ ಈ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ವರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದೆ ಎಂದು ಹೇಳಲಾಗಿದೆ.