EBM News Kannada
Leading News Portal in Kannada

ಕಾನ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಗ್ರಾನ್ ಪ್ರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಪಾಯಲ್ ಕಪಾಡಿಯಾ

0


ಹೊಸದಿಲ್ಲಿ: ಶನಿವಾರ ಸಂಪನ್ನಗೊಂಡ ಕಾನ್ ಚಲನಚಿತ್ರೋತ್ಸವ 2024ರಲ್ಲಿ ತನ್ನ ನಿರ್ದೇಶನದ ಮೊದಲ ಕಥಾಚಿತ್ರ ‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್ ’ಗಾಗಿ ಎರಡನೇ ಪ್ರತಿಷ್ಠಿತ ಪ್ರಶಸ್ತಿ ಗ್ರಾನ್ ಪ್ರಿ ಅನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸವನ್ನು ಸೃಷ್ಟಿಸಿರುವ ಪಾಯಲ್ ಕಪಾಡಿಯಾ ದೇಶಾದ್ಯಂತ ವ್ಯಾಪಕ ಪ್ರಶಂಸೆ ಮತ್ತು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ಭಾರತಕ್ಕೆ ಲಭಿಸಿರುವ ಮೊದಲ ಗ್ರಾನ್ ಪ್ರಿ ಪ್ರಶಸ್ತಿಯಾಗಿದೆ. ಇದೇ ಪಾಯಲ್ ಕಪಾಡಿಯಾ ಒಮ್ಮೆ ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII)ಯಲ್ಲಿ ಶಿಸ್ತುಕ್ರಮವನ್ನು ಎದುರಿಸಿದ್ದರು ಮತ್ತು ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು.

2015ರಲ್ಲಿ ಎಫ್ಟಿಐಐ ವಿದ್ಯಾರ್ಥಿನಿಯಾಗಿದ್ದಾಗ ಸಂಸ್ಥೆಯ ಅಧ್ಯಕ್ಷರಾಗಿ ಟಿವಿ ನಟ-ರಾಜಕಾರಣಿ, ಬಿಜೆಪಿ ನಾಯಕ ಗಜೇಂದ್ರ ಚೌಹಾಣ್ ಅವರ ನೇಮಕಾತಿಯ ವಿರುದ್ಧ ನಾಲ್ಕು ತಿಂಗಳು ಕಾಲ ನಡೆದಿದ್ದ ಸುದೀರ್ಘ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಾಯಲ್ ಶಿಸ್ತುಕ್ರಮದ ಸುಳಿಯಲ್ಲಿ ಸಿಕ್ಕಿಕೊಂಡಿದ್ದರು.

ಹಲವಾರು ವಿದ್ಯಾರ್ಥಿ ಆಂದೋಲನಗಳಿಗೆ ಸಾಕ್ಷಿಯಾಗಿರುವ ಎಫ್ಟಿಐಐನ ಇತಿಹಾಸದಲ್ಲಿ ಇದು ಸುದೀರ್ಘ (139 ದಿನಗಳು) ಪ್ರತಿಭಟನೆಯಾಗಿತ್ತು. ಇತರ ಪ್ರತಿಭಟನಾಕಾರರೊಂದಿಗೆ ಸೇರಿ ಚೌಹಾಣ್ ಅವರಲ್ಲಿ ಅರ್ಹತೆಗಳ ಕೊರತೆಯನ್ನು ಬೆಟ್ಟು ಮಾಡಿದ್ದ ಪಾಯಲ್ ತನ್ನ ತರಗತಿಗಳನ್ನು ಬಹಿಷ್ಕರಿಸಿದ್ದರು. ಪರಿಣಾಮವಾಗಿ ಸಂಸ್ಥೆಯು ಅವರ ವಿದ್ಯಾರ್ಥಿವೇತನವನ್ನು ಹಿಂದೆಗೆದುಕೊಂಡಿತ್ತು.

ಪ್ರತಿಭಟನೆಯ 68ನೇ ದಿನವಾಗಿದ್ದ 2015,‌ ಆ.5ರಂದು ವಿದ್ಯಾರ್ಥಿಗಳು ತರಗತಿಗಳಿಗೆ ಗೈರುಹಾಜರಾಗಿ ಭಾವೋದ್ರಿಕ್ತ ಭಾಷಣಗಳನ್ನು ಮಾಡುತ್ತಿದ್ದರೆ ಇತ್ತ ಆಗಿನ ಎಫ್ಟಿಐಐ ನಿರ್ದೇಶಕ ಪ್ರಶಾಂತ ಪತ್ರಾಬೆ ಅವರು 2008ರ ಬ್ಯಾಚ್ನ ವಿದ್ಯಾರ್ಥಿಗಳಿಗೆ ಅವಧಿ ಮೀರಿ ವಾಸ್ತವ್ಯದ ಕಾರಣವನ್ನೊಡ್ಡಿ ಹಾಸ್ಟೆಲ್ ಖಾಲಿ ಮಾಡುವಂತೆ ನೋಟಿಸ್ ಹೊರಡಿಸಿದ್ದರು. ಜೊತೆಗೆ ಅವರ ಚಲನಚಿತ್ರ ಯೋಜನೆಗಳ ಮೌಲ್ಯಮಾಪನಕ್ಕೆ ಆದೇಶಿಸಿದ್ದರು. ಈ ಪೈಕಿ ಹೆಚ್ಚಿನ ಯೋಜನೆಗಳು ಅಪೂರ್ಣವಾಗಿದ್ದವು.

ಇದನ್ನು ತರ್ಕಬಾಹಿರ ಮತ್ತು ನ್ಯಾಯಸಮ್ಮತವಲ್ಲದ ಕ್ರಮವೆಂದು ಪರಿಗಣಿಸಿದ್ದ ವಿದ್ಯಾರ್ಥಿಗಳು ಪತ್ರಾಬೆಯವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಸ್ಪಷ್ಟೀಕರಣವನ್ನು ಕೋರಿದ್ದರು. ಮಾನವ ಸರಪಳಿಯನ್ನು ನಿರ್ಮಿಸುವ ಮೂಲಕ ಪತ್ರಾಬೆಯವರ ಕಚೇರಿಗೆ ಮುತ್ತಿಗೆ ಹಾಕಿದ್ದ ವಿದ್ಯಾರ್ಥಿಗಳು ಅವರನ್ನು ದಿಗ್ಬಂಧನದಲ್ಲಿರಿಸಿದ್ದರು. ಮಧ್ಯರಾತ್ರಿ ದಾಳಿ ನಡೆಸಿದ್ದ ಪೋಲಿಸರು ಐವರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಬಳಿಕ ಕಪಾಡಿಯಾ ಸೇರಿದಂತೆ ಸುಮಾರು 35 ವಿದ್ಯಾರ್ಥಿಗಳನ್ನು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಪರಿಣಾಮವಾಗಿ ಶಿಸ್ತುಕ್ರಮವನ್ನು ಎದುರಿಸಿದ್ದ ಪಾಯಲ್ ತನ್ನ ವಿದ್ಯಾರ್ಥಿವೇತನವನ್ನು ಕಳೆದುಕೊಂಡಿದ್ದರು ಮತ್ತು ಇತರ ಏಳು ವಿದ್ಯಾರ್ಥಿಗಳೊಂದಿಗೆ ವಿದೇಶಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದರು.

ವಯಸ್ಸಾದ ಮಹಿಳೆ ಮತ್ತು ಆಕೆಯ ಮನೆಗೆಲಸದಾಳಿನ ಕಥೆಯನ್ನು ನಿರೂಪಿಸಿದ್ದ ಪಾಯಲ್ ರ 13 ನಿಮಿಷಗಳ ಕಿರುಚಿತ್ರ ‘ಆಫ್ಟರ್ನೂನ್ ಕ್ಲೌಡ್ಸ್’ (2017) ಅದೇ ವರ್ಷ 70ನೇ ಕಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗವನ್ನು ಪ್ರವೇಶಿಸಿದ ನಂತರವಷ್ಟೇ ಎಫ್ಟಿಐಐ ತನ್ನ ನಿರ್ಧಾರವನ್ನು ಬದಲಿಸಿತ್ತು ಮತ್ತು ಅವರನ್ನು ಬೆಂಬಲಿಸಲು ನಿರ್ಧರಿಸಿತ್ತು. ಬೆಂಬಲ ಪತ್ರವನ್ನು ನೀಡಿದ್ದ ಅದು ಪಾಯಲ್ ರ ಪ್ರಯಾಣ ವೆಚ್ಚವನ್ನು ಭರಿಸಲು ಒಪ್ಪಿಕೊಂಡಿತ್ತು.

ಬಳಿಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಹಿಳೆಯೋರ್ವರು ತನ್ನ ಪರಿತ್ಯಕ್ತ ಪ್ರೇಮಿಗೆ ಪತ್ರಗಳನ್ನು ಬರೆಯುವ ಕುರಿತು ‘ಎ ನೈಟ್ ಆಫ್ ನೋವಿಂಗ್ ನಥಿಂಗ್ ’ ಸಾಕ್ಷ್ಯಚಿತ್ರವನ್ನು ನಿಮಿಸಿದ್ದರು. 2021ರಲ್ಲಿ ಈ ಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ‘ಲೆ ಪ್ರಿ ಡು ಡಾಕ್ಯುಮೆಂಟೇರ್’ ಪ್ರಶಸ್ತಿಯನ್ನು ಗೆದ್ದಿತ್ತು.

ಹಿರಿಯ ನಟಿ ನಲಿನಿ ಮಾಲಿನಿಯವರ ಪುತ್ರಿಯಾಗಿರುವ ಪಾಯಲ್ ಆಂಧ್ರಪ್ರದೇಶದ ಬೋರ್ಡಿಂಗ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದ್ದರು.

‘ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್’ನಲ್ಲಿ ದಿವ್ಯ ಪ್ರಭಾ,ಕಾನಿ ಕುಸ್ರುತಿ,ಅಝೀಸ್ ಹನೀಫಾ,‌ ಹೃದು ಹಾರೂನ್, ಲವ್ಲೀನ್ ಮಿಶ್ರಾ ಮತ್ತು ಛಾಯಾ ಕದಂ ನಟಿಸಿದ್ದಾರೆ.

Leave A Reply

Your email address will not be published.