EBM News Kannada
Leading News Portal in Kannada

ಇಳಯರಾಜ ಶೋಕಾಸ್‌ ನೋಟಿಸ್‌ ಗೆ ಪ್ರತಿಕ್ರಿಯಿಸಿದ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರ ನಿರ್ಮಾಪಕ

0


ತಿರುವನಂತಪುರಂ: ಇಳಯರಾಜ ನೀಡಿರುವ ಹಕ್ಕು ಸ್ವಾಮ್ಯ ಉಲ್ಲಂಘನೆ ನೋಟಿಸ್ ಕುರಿತು ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕ ಶಾನ್ ಆ್ಯಂಟನಿ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಈ ಕುರಿತು The News Minute ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಎರಡು ಆಡಿಯೊ ಕಂಪನಿಗಳಿಂದ ‘ಗುಣ’ದ ‘ಕಣ್ಮಣಿ ಅನ್ಬೊಡು’ ಚಿತ್ರಗೀತೆಯನ್ನು ಬಳಸಿಕೊಳ್ಳಲು ಅನುಮತಿ ಪಡೆಯಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇದಕ್ಕೂ ಮುನ್ನ, ‘96’ ಚಿತ್ರದ ನಿರ್ದೇಶಕ ಪ್ರೇಮ್ ಕುಮಾರ್ ಕೂಡಾ ಚಿತ್ರ ತಂಡವು ಗೀತೆಯನ್ನು ಬಳಸಿಕೊಳ್ಳಲು ಅನುಮತಿ ಪಡೆದಿದೆ ಎಂದು ಹೇಳಿದ್ದರು.

“ತೆಲುಗು ಆವೃತ್ತಿಯ ಗೀತೆಯ ಹಕ್ಕು ಸ್ವಾಮ್ಯವನ್ನು ಒಂದು ಕಂಪನಿ ಹೊಂದಿದ್ದರೆ, ಉಳಿದ ಭಾಷೆಗಳ ಹಕ್ಕು ಸ್ವಾಮ್ಯವನ್ನು ಇತರ ಕಂಪನಿಗಳು ಹೊಂದಿವೆ. ಈ ಗೀತೆಯ ಹಕ್ಕು ಸ್ವಾಮ್ಯ ಹೊಂದಿರುವ ಪಿರಮಿಡ್ ಹಾಗೂ ಶ್ರೀದೇವಿ ಸೌಂಡ್ಸ್ ಕಂಪನಿಗಳಿಂದ ನಾವು ಚಿತ್ರಗೀತೆ ಬಳಕೆಯ ಹಕ್ಕನ್ನು ಪಡೆದಿದ್ದೇವೆ’ ಎಂದು ನಿರ್ಮಾಪಕ ಶಾನ್ ಸ್ಪಷ್ಟಪಡಿಸಿದ್ದಾರೆ.

ನಾನು ಹಾಗೂ ಸಹ ನಿರ್ಮಾಪಕರಾದ ಸೌಬಿನ್ ಶಬೀರ್ ಹಾಗೂ ಬಾಬು ಶಾಹಿರ್ ಅವರು ಇಳಯರಾಜ ಅವರಿಂದ ಇನ್ನಷ್ಟೆ ಕಾನೂನು ನೋಟಿಸ್ ಸ್ವೀಕರಿಸಬೇಕಿದೆ ಎಂದೂ ಶಾನ್ ಆ್ಯಂಟನಿ ಹೇಳಿದ್ದಾರೆ.

ಕಮಲ್ ಹಾಸನ್ ನಟನೆಯ ‘ಗುಣ’ ಚಿತ್ರದ ‘ಕಣ್ಮಣಿ ಅನ್ಬೋಡು’ ಗೀತೆಯನ್ನು ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದಲ್ಲಿ ಬಳಸಿಕೊಂಡಿರುವುದರ ವಿರುದ್ಧ ಇಳಯರಾಜ ಅವರು ಮೇ 22ರಂದು ‘ಮಂಜುಮ್ಮೆಲ್ ಬಾಯ್ಸ್’ ಚಿತ್ರದ ನಿರ್ಮಾಪಕರಿಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದರು. ಈ ಗೀತೆಯನ್ನು ಶೀರ್ಷಿಕೆ ಪ್ರದರ್ಶನದ ಸಂದರ್ಭದಲ್ಲಿ ಹಾಗೂ ಚಿತ್ರದಲ್ಲಿ ಗುಂಪಿನ ಓರ್ವ ವ್ಯಕ್ತಿಯನ್ನು ರಕ್ಷಿಸುವ ಪ್ರಮುಖ ಘಟ್ಟದಲ್ಲಿ ಬಳಸಿಕೊಳ್ಳಲಾಗಿದೆ.

Leave A Reply

Your email address will not be published.