ನ್ಯೂಯಾರ್ಕ್ : ಕಾಮಿಡಿಗಾಗಿ ಪ್ರತಿಷ್ಠಿತ ಇಂಟರ್‌ನ್ಯಾಷನಲ್ ಎಮ್ಮಿ ಪ್ರಶಸ್ತಿಯನ್ನು ಕಾಮಿಡಿಯನ್ ವೀರ್ ದಾಸ್ ಗೆದ್ದಿದ್ದಾರೆ. ಇದು ಅವರ ಎರಡನೇ ನಾಮನಿರ್ದೇಶನ ಮತ್ತು ಮೊದಲನೇ ಗೆಲುವಾಗಿದೆ. ನೆಟ್‌ಫ್ಲಿಕ್ಸ್ ಗಾಗಿ ತಮ್ಮ ಕಾಮಿಡಿ ಸರಣಿ ‘ವೀರ್ ದಾಸ್: ಲ್ಯಾಂಡಿಂಗ್’ಗಾಗಿ ಅವರು ಈ ಪ್ರಶಸ್ತಿ ಪಡೆದಿದ್ದು ಯುಕೆ ಶೋ ಡೆರ್ರಿ ಗರ್ಲ್ಸ್ ಸೀಸನ್ 3 ಜೊತೆಗೆ ಈ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ವೀರ್ ದಾಸ್ ಅವರು ಈ ಹಿಂದೆ 2021ರಲ್ಲಿ ಇದೇ ವಿಭಾಗದಲ್ಲಿ ತಮ್ಮ ಫಾರ್ ಇಂಡಿಯಾಗಾಗಿ ನಾಮನಿರ್ದೇಶನಗೊಂಡಿದ್ದರು.
“ವೀರ್ ದಾಸ್: ಲ್ಯಾಂಡಿಂಗ್”ಗಾಗಿ ಎಮ್ಮಿ ಗೆದ್ದಿರುವುದು ನನ್ನ ಪಾಲಿನ ಮೈಲಿಗಲ್ಲು ಮಾತ್ರವಲ್ಲ ಭಾರತೀಯ ಕಾಮಿಡಿ ಕ್ಷೇತ್ರದ ಮೈಲಿಗಲ್ಲು” ಎಂದು ವೀರ್ ದಾಸ್ ಹೇಳಿಕೊಂಡಿದ್ದಾರೆ.
ವೀರ್ ದಾಸ್ ಅವರು 35 ನಾಟಕಗಳು, 100ಕ್ಕೂ ಅಧಿಕ ಸ್ಟ್ಯಾಂಡ್-ಅಪ್ ಶೋಗಳು, 18 ಚಲನಚಿತ್ರಗಳು, ಎಂಟು ಟಿವಿ ಶೋಗಳು ಹಾಗೂ ಆರು ಕಾಮಿಡಿ ಸ್ಪೆಷಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಾರಿ ಎಮ್ಮೀಸ್ ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದ್ದ ನಾಲ್ಕು ಭಾರತೀಯರಲ್ಲಿ ವೀರ್ ದಾಸ್ ಒಬ್ಬರಾಗಿದ್ದರು. ಶೆಫಾಲಿ ಶಾ ಅವರು ಡೆಲ್ಲಿ ಕ್ರೈಂ ಸರಣಿಯಲ್ಲಿನ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರೂ ಈ ಪ್ರಶಸ್ತಿ ಮೆಕ್ಸಿಕೋದ ಕಾರ್ಲಾ ಸೌಜಾ ಅವರಿಗೆ ಹೋಗಿದೆ. ಜಿಮ್ ಸರಭ್ ಅವರು ರಾಕೆಟ್ ಬಾಯ್ಸ್‌ನಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರೂ ಪ್ರಶಸ್ತಿ ಅಮೆರಿಕಾದ ಮಾರ್ಟಿನ್ ಫ್ರೀಮೆನ್ ಅವರ ಪಾಲಾಗಿದೆ.
ಏಕ್ತಾ ಕಪೂರ್ ಈ ವರ್ಷದ ಇಂಟರ್‌ನ್ಯಾಷನಲ್ ಎಮ್ಮಿ ಡೈರೆಕ್ಟರೇಟ್ ಪ್ರಶಸ್ತಿ ಪಡೆದಿದ್ದಾರೆ.