‘ದ್ವೇಷದ ಭಾಷಣಕ್ಕೂ ಅವಕಾಶ ನೀಡಬೇಕು’: ಬಹಿರಂಗವಾಗಿ ಹೇಳಿದ ವಿವೇಕ್ ಅಗ್ನಿಹೋತ್ರಿ – Kannada News | Even hate speech should be allowed Says The Vaccine War director Vivek Agnihotri
Vivek Agnihotri: ‘ಒಎಂಜಿ 2’ ಸಿನಿಮಾಗೆ ಸೆನ್ಸಾರ್ ಮಂಡಳಿಯವರು ಅನೇಕ ಬದಲಾವಣೆಗಳನ್ನು ಮಾಡುವಂತೆ ಆದೇಶಿದ ಬಳಿಕ ‘ಎ’ ಪ್ರಮಾಣಪತ್ರ ನೀಡಿದ್ದಾರೆ. ಇದು ಸಮರ್ಥನೀಯವಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಅವರು ಕೂಡ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಭಾಗವಾಗಿದ್ದರೂ ಕೂಡ ಈ ರೀತಿಯ ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣ ಆಗಿದೆ.
ವಿವೇಕ್ ಅಗ್ನಿಹೋತ್ರಿ
ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರನ್ನು ಅನೇಕ ವಿವಾದಗಳು ಸುತ್ತಿಕೊಂಡಿವೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರ ಖ್ಯಾತಿ ಹೆಚ್ಚಿತು. ಆ ನಂತರ ಅವರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆದರು. ಸಿನಿಮಾ ಮಾತ್ರವಲ್ಲದೇ ಬೇರೆ ಬೇರೆ ವಿಚಾರಗಳ ಬಗ್ಗೆಯೂ ತಮ್ಮ ಅನಿಸಿಕೆ ಹಂಚಿಕೊಳ್ಳಲು ಅವರು ಆರಂಭಿಸಿದರು. ಬಲಪಂಥೀಯ ವಿಚಾರಗಳ ಪರವಾಗಿ ವಿವೇಕ್ ಅಗ್ನಿಹೋತ್ರಿ ಆಗಾಗ ಮಾತನಾಡುತ್ತಾರೆ. ಈ ನಡುವೆ ಅವರೊಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸೆನ್ಸಾರ್ ಮಂಡಳಿಯ (Censor Board) ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ, ದ್ವೇಷದ ಭಾಷಣಕ್ಕೂ (Hate Speech) ಅವಕಾಶ ನೀಡಬೇಕು ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ‘ಒಎಂಜಿ 2’ ಸಿನಿಮಾಗೆ ಸೆನ್ಸಾರ್ ಮಂಡಳಿಯವರು ಅನೇಕ ಬದಲಾವಣೆಗಳನ್ನು ಮಾಡುವಂತೆ ಆದೇಶಿದ ಬಳಿಕ ‘ಎ’ ಪ್ರಮಾಣಪತ್ರ ನೀಡಿದ್ದಾರೆ. ಇದು ಸಮರ್ಥನೀಯವಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಅವರು ಕೂಡ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಭಾಗವಾಗಿದ್ದಾರೆ. ಹಾಗಿದ್ದರೂ ಕೂಡ ಅವರು ಈ ರೀತಿಯ ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣ ಆಗಿದೆ. ‘ಇಂಡಿಯಾ.ಕಾಮ್’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.
‘ನಾನು ಕೂಡ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಭಾಗವಾಗಿದ್ದರೂ ಕೂಡ ಅದನ್ನು ವಿರೋಧಿಸುತ್ತೇನೆ. ಯಾವುದೇ ಸೆನ್ಸಾರ್ ಮಂಡಳಿ ಇರಬಾರದು. ಸಿನಿಮಾಗಳನ್ನು ಬಹಿಷ್ಕರಿಸುವ ಮತ್ತು ಬ್ಯಾನ್ ಮಾಡುವುದರ ಬಗ್ಗೆಯೂ ನನ್ನ ವಿರೋಧವಿದೆ. ಮುಕ್ತ ಮಾತಿನ ಬಗ್ಗೆ ನನಗೆ ನಂಬಿಕೆ ಇದೆ. ದ್ವೇಷದ ಭಾಷಣಕ್ಕೂ ಅವಕಾಶ ನೀಡಬೇಕು. ಸಿನಿಮಾ ಮಾಡುವವರ ಉದ್ದೇಶ ಏನು? ಉದ್ದೇಶ ಕೆಟ್ಟದ್ದಾಗಿ ಇಲ್ಲ ಎಂದರೆ ಮುಂದುವರಿಯಲಿ ಬಿಡಿ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
ಸದ್ಯ ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ದಸರಾ ಹಬ್ಬದ ವೇಳೆ ಈ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದರಲ್ಲಿ ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಅವರು ನಟಿಸುತ್ತಿದ್ದಾರೆ. ಇನ್ನು, ‘ದಿ ಕಾಶ್ಮೀರ್ ಫೈಲ್ಸ್ ಅನ್ರಿಪೋರ್ಟೆಡ್’ ವೆಬ್ ಸರಣಿಗೂ ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಇದರ ಟ್ರೇಲರ್ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಜೀ5 ಒಟಿಟಿ ಮೂಲಕ ಇದು ರಿಲೀಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.