‘ಜೈಲರ್’ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆಯೂ ಕೇಳದೇ ಮನಶಾಂತಿಗಾಗಿ ಹಿಮಾಲಯಕ್ಕೆ ತೆರಳಿದ ರಜನಿಕಾಂತ್ – Kannada News | Rajinikanth visits Himalayas before Jailer movie release for this reason
Rajinikanth: ರಜನಿಕಾಂತ್ ಅವರದ್ದು ಸಿಂಪಲ್ ವ್ಯಕ್ತಿತ್ವ. ತೆರೆ ಮೇಲೆ ಅಬ್ಬರಿಸುವ ಅವರು ತೆರೆ ಹಿಂದೆ ಶಾಂತವಾಗಿ ಇರಲು ಬಯಸುತ್ತಾರೆ. ಅವರಿಗೆ ದೇವರ ಮೇಲೆ ಅಪಾರವಾದ ಭಕ್ತಿ ಇದೆ ಕೂಡ. ಹಾಗಾಗಿ ಹಿಮಾಲಯಕ್ಕೆ ತೆರಳಿದ್ದಾರೆ. ಅಲ್ಲಿನ ಅನೇಕ ದೇವಾಲಯಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ.
ರಜನಿಕಾಂತ್
‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ಅವರ ಸಿನಿಮಾ ರಿಲೀಸ್ ಆಗುವಾಗ ಸಹಜವಾಗಿಯೇ ಸುದ್ದು ಜೋರಾಗಿ ಇರುತ್ತದೆ. ಅಷ್ಟರಮಟ್ಟಿಗೆ ಹವಾ ಕ್ರಿಯೇಟ್ ಮಾಡಿರುವ ನಟ ಅವರು. ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾ ಬಿಡುಗಡೆ ಆಗುವ ದಿನ ಚಿತ್ರಮಂದಿರದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣ ಆಗಿರುತ್ತದೆ. ಇಂದು (ಆಗಸ್ಟ್ 10) ‘ಜೈಲರ್’ (Jailer) ಸಿನಿಮಾದ ರಿಲೀಸ್ ಸಂದರ್ಭದಲ್ಲೂ ಅಂಥ ವಾತಾವರಣ ಮನೆಮಾಡಿದೆ. ಆದರೆ ರಜನಿಕಾಂತ್ ಅವರು ಈ ಜಾತ್ರೆಯಲ್ಲಿ ಭಾಗಿಯಾಗಿಲ್ಲ. ಬದಲಿಗೆ ಅವರು ಮನಶಾಂತಿಯ ಹುಡುಕಾಟದಲ್ಲಿ ಇದ್ದಾರೆ. ಅದಕ್ಕಾಗಿ ಅವರು ಹಿಮಾಲಯಕ್ಕೆ ತೆರಳಿದ್ದಾರೆ. ‘ಜೈಲರ್’ ಚಿತ್ರಕ್ಕೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಬರಬಹುದು ಎಂಬ ಚಿಂತೆಯನ್ನೂ ಮರೆತು ಅವರು ಹಿಮಾಲಯದತ್ತ (Himalaya) ಪ್ರಯಾಣ ಬೆಳೆಸಿದ್ದಾರೆ. ಒಂದು ವಾರಗಳ ಕಾಲ ಅವರು ಅಲ್ಲಿಯೇ ಇರಲಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ತಿಳಿದಿರುವಂತೆ ರಜನಿಕಾಂತ್ ಅವರದ್ದು ಸಿಂಪಲ್ ವ್ಯಕ್ತಿತ್ವ. ತೆರೆ ಮೇಲೆ ಅಬ್ಬರಿಸುವ ಅವರು ತೆರೆ ಹಿಂದೆ ಶಾಂತವಾಗಿ ಇರಲು ಬಯಸುತ್ತಾರೆ. ಅಲ್ಲದೇ ಅವರಿಗೆ ದೇವರ ಮೇಲೆ ಅಪಾರವಾದ ಭಕ್ತಿ ಇದೆ ಕೂಡ. ಆ ಕಾರಣದಿಂದಲೇ ಅವರು ಈಗ ಹಿಮಾಲಯಕ್ಕೆ ತೆರಳಿದ್ದಾರೆ. ಅಲ್ಲಿನ ಅನೇಕ ದೇವಾಲಯಗಳಿಗೆ ಭೇಟಿ ನೀಡುವ ಉದ್ದೇಶದಿಂದ ರಜನಿಕಾಂತ್ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ.
ಹಿಮಾಲಯಕ್ಕೆ ರಜನಿಕಾಂತ್ ಅವರು ಭೇಟಿ ನೀಡಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಅನೇಕ ಬಾರಿ ಅವರು ಅಲ್ಲಿಗೆ ತೆರಳಿದ್ದರು. ಆದರೆ ಕೊವಿಡ್ ಕಾಣಿಸಿಕೊಂಡ ನಂತರ ಹಿಮಾಲಯಕ್ಕೆ ಹೋಗಲು ಅವರಿಗೆ ಸಾಧ್ಯವಾಗಿರಲಿಲ್ಲ. ನಾಲ್ಕು ವರ್ಷದ ಗ್ಯಾಪ್ ಬಳಿಕ ಅವರು ಮತ್ತೆ ಹಿಮಾಲಯಕ್ಕೆ ಹೋಗಿದ್ದಾರೆ. ಇತ್ತ, ‘ಜೈಲರ್’ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮಾಸ್ ಪ್ರೇಕ್ಷಕರು ಈ ಸಿನಿಮಾವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ತಮಿಳುನಾಡಿನ ಹೊರಗೂ ಈ ಸಿನಿಮಾ ಅಬ್ಬರಿಸುತ್ತಿದೆ.
‘ಜೈಲರ್’ ಸಿನಿಮಾಗೆ ನೆಲ್ಸನ್ ದಿಲೀಪ್ಕುಮಾರ್ ಅವರು ನಿರ್ದೇಶನ ಮಾಡಿದ್ದು, ‘ಸನ್ ಪಿಕ್ಚರ್ಸ್’ ಮೂಲಕ ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದೆ. ಮೋಹನ್ಲಾಲ್, ಜಾಕಿ ಶ್ರಾಫ್, ಶಿವರಾಜ್ಕುಮಾರ್, ರಮ್ಯಾ ಕೃಷ್ಣನ್, ಯೋಗಿ ಬಾಬು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ತಮನ್ನಾ ಭಾಟಿಯಾ ಅವರು ಒಂದು ಪಾತ್ರಕ್ಕೆ ಬಣ್ಣ ಹಚ್ಚುವುದರ ಜೊತೆಗೆ ‘ಕಾಲಾವಾ..’ ಹಾಡಿನಲ್ಲಿ ಕುಣಿದು ಭರ್ಜರಿ ಮನರಂಜನೆ ನೀಡಿದ್ದಾರೆ. ಮೊದಲ ದಿನ ಬಹುತೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.