ಚಿನ್ನಾರಿಮುತ್ತನ ಅಗಲಿ ಮರಳಿ ಬಾರದ ಲೋಕಕೆ ಸ್ಪಂದನಾ ಪಯಣ – Kannada News | Vijay Raghvendra’s Wife Spandana Final Rituals Completed in Harishchandra Ghatt
Spandana Vijay Raghavendra: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಂತಿಮ ಸಂಸ್ಕಾರ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿತು. ಭಾರವಾದ ಹೃದಯದಿಂದ ಸ್ಪಂದನಾರನ್ನು ಬಾರದ ಲೋಕಕ್ಕೆ ಕಳಿಸಿಕೊಟ್ಟರು.
ವಿಜಯ್ ರಾಘವೇಂದ್ರ
ನಟ ವಿಜಯ್ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಇತ್ತೀಚೆಗಷ್ಟೆ ಹೃದಯಾಘಾತದಿಂದ ನಿಧನ ಹೊಂದಿದ ಸ್ಪಂದನಾ ಅವರ ಅಂತ್ಯಸಂಸ್ಕಾರವನ್ನು ಹರಿರ್ಶಚಂದ್ರ ಘಾಟ್ನಲ್ಲಿ ಇಂದು (ಆಗಸ್ಟ್ 09) ನಲ್ಲಿ ನಡೆಸಲಾಗಿದೆ. ಪತಿ ವಿಜಯ್ ರಾಘವೇಂದ್ರ, 14 ವರ್ಷದ ಪುತ್ರ ಶೌರ್ಯ, ತಂದೆ ಬಿಕೆ ಶಿವರಾಂ, ಅಣ್ಣ ಹರೀಶ್ ಶಿವರಾಂ ನೂರಾರು ಬಂಧುಗಳು, ಸ್ನೇಹಿತರು ಕಣ್ಣೀರು ಹಾಕಿ ಸ್ಪಂದನಾರನ್ನು ಬಾರದ ಲೋಕಕ್ಕೆ ಕಳಿಸಿಕೊಟ್ಟಿದ್ದಾರೆ.
ಮಲ್ಲೇಶ್ವರಂ ಸ್ಪಂದನಾರ ತವರು ಮನೆಯಲ್ಲಿ ಅಂತಿಮ ದರ್ಶನ ಆಯೋಜಿಸಲಾಗಿತ್ತು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಚಿತ್ರರಂಗದ ಬಹುತೇಕ ಗಣ್ಯರು ಆಗಮಿಸಿ ಅಂತಿಮ ದರ್ಶನ ಮಾಡಿದರು. ಆ ಬಳಿಕ ತವರು ಮನೆಯಿಂದ ಹರಿಶ್ಚಂದ್ರ ಘಾಟ್ಗೆ ಮೆರವಣಿಗೆಯನ್ನು ಸ್ಪಂದನಾರ ಶವಯಾತ್ರೆ ನಡೆಯಿತು. ಹಾದಿಯಲ್ಲಿ ಸಹ ಹಲವು ಜನ ಸಾಮಾನ್ಯರು, ವಿಜಯ್ ರಾಘವೇಂದ್ರ ಅಭಿಮಾನಿಗಳು ಸ್ಪಂದನಾರ ಅಂತಿಮ ದರ್ಶನ ಪಡೆದರು.
ಹದಿನಾಲ್ಕು ವರ್ಷದ ಮಗ ಶೌರ್ಯ ಮಡಿಕೆ ಹಿಡಿದು ತಾಯಿಯ ಅಂತಿಮ ಸಂಸ್ಕಾರ ನಡೆಸಿದ್ದು ಕರುಳು ಕಿವುಚುವಂತಿತ್ತು. ಅಂತಿಮ ಸಂಸ್ಕಾರದ ವೇಳೆ ನೆರೆದಿದ್ದ ಎಲ್ಲರ ದುಃಖದ ಕಟ್ಟೆ ಒಡೆದಿತ್ತು. ಸ್ಪಂದನಾ ತಂದೆ ಬಿಕೆ ಶಿವರಾಂ ಅವರ ದುಃಖವನ್ನಂತೂ ಹೇಳತೀರದು. ನಟ ಶ್ರೀಮುರಳಿ ಹಾಗೂ ಇನ್ನಿತರರು ಬಿಕೆ ಶಿವರಾಂ ಅವರನ್ನು ತಬ್ಬಿ ಸಂತೈಸಿದರು. ದೊಡ್ಮನೆ ಕುಟುಂಬದ ಹಲವು ಮಂದಿ ಅಂತಿಮ ಸಂಸ್ಕಾರದ ವೇಳೆ ಅಲ್ಲಿಯೇ ಇದ್ದು ಬಳಿಕವಷ್ಟೆ ಅಲ್ಲಿಂದ ತೆರಳಿದರು.
ಥಾಯ್ಲೆಂಡ್ಗೆ ಪ್ರವಾಸಕ್ಕೆಂದು ಕಸಿನ್ ಜೊತೆಗೆ ತೆರಳಿದ್ದ ಸ್ಪಂದನಾ ಹೃದಯಾಘಾತದಿಂದ ನಿದ್ದೆಯಲ್ಲಿ ಸಾವನಪ್ಪಿದ್ದರು. ಅವರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ಭಾನುವಾರ ವಿಷಯ ತಿಳಿದ ಕೂಡಲೇ ಥಾಯ್ಲೆಂಡ್ಗೆ ತೆರಳಿದ್ದ ವಿಜಯ್ ರಾಘವೇಂದ್ರ ಅಲ್ಲಿಯೇ ಇದ್ದು ಪತ್ನಿಯ ಮೃತ ದೇಹವನ್ನು ಮಂಗಳವಾರ ರಾತ್ರಿ ಬೆಂಗಳೂರಿಗೆ ಕೊಂಡು ತಂದರು.
ಬುಧವಾರ ಬೆಳಿಗ್ಗಿನಿಂದಲೇ ಸ್ಪಂದನಾರ ಮಲ್ಲೇಶ್ವರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದೊಡ್ಮನೆಯ ಬಹುತೇಕ ಎಲ್ಲ ಸದಸ್ಯರು, ನಟ ಯಶ್, ರವಿಚಂದ್ರನ್, ಉಮಾಶ್ರೀ, ಧ್ರುವ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಸೃಜನ್ ಲೋಕೇಶ್, ಪ್ರಿಯಾಂಕಾ ಉಪೇಂದ್ರ, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ರಕ್ಷಿತ್ ಶೆಟ್ಟಿ ಇನ್ನು ಹಲವಾರು ಮಂದಿ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮುನಿರತ್ನ ಹಾಗೂ ಇನ್ನೂ ಹಲವಾರು ಮಂದಿ ರಾಜಕೀಯ ಗಣ್ಯರು ಸಹ ಅಂತಿಮ ದರ್ಶನದ ಭಾಗಿಯಾಗಿದ್ದರು.