ಆಗಸ್ಟ್ 8ರಂದು ಭಾರತಕ್ಕೆ ರವಾನೆ ಆಗಲಿದೆ ಸ್ಪಂದನಾ ಮೃತದೇಹ; ಯಾವಾಗ ಅಂತ್ಯಕ್ರಿಯೆ? – Kannada News | Spandana Vijay Raghavendra Death: Funeral likely to take place on 9th August in Bengaluru
Spandana Vijay Raghavendra: ಮಂಗಳವಾರ (ಆಗಸ್ಟ್ 8) ಸಂಜೆ ವೇಳೆಗೆ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಪಾರ್ಥಿವ ಶರೀರವು ಬೆಂಗಳೂರು ತಲುಪುವ ಸಾಧ್ಯತೆ ಇದೆ. ಬಳಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಸ್ಪಂದನಾ ವಿಜಯ್ ರಾಘವೇಂದ್ರ
ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ (Vijay Raghavendra) ಅವರ ಮಡದಿ ಸ್ಪಂದನಾ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಕುಟುಂಬದವರ ಜೊತೆ ಬ್ಯಾಂಕಾಕ್ ತೆರಳಿದ್ದ ಸ್ಪಂದನಾಗೆ ಆ.6ರಂದು ಹೃದಯಾಘಾತ (Heart Attack) ಸಂಭವಿಸಿತು. ಅವರ ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಮಂಗಳವಾರ (ಆಗಸ್ಟ್ 8) ಸಂಜೆ ವೇಳೆಗೆ ಪಾರ್ಥಿವ ಶರೀರವು ಬೆಂಗಳೂರು ತಲುಪುವ ಸಾಧ್ಯತೆ ಇದೆ. ಬಳಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ, ಬುಧವಾರ (ಆಗಸ್ಟ್ 9) ಸ್ಪಂದನಾ ವಿಜಯ್ ರಾಘವೇಂದ್ರ ಅವರ ಅಂತ್ಯಕ್ರಿಯೆ (Spandana Vijay Raghavendra Funeral) ನೆರವೇರಲಿದೆ. ಈಡಿಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ತೀರ್ಮಾನಿಸಲಾಗಿದೆ.
ವಿಜಯ್ ರಾಘವೇಂದ್ರ ಅವರದ್ದು ದೊಡ್ಡ ಕುಟುಂಬ. ಡಾ. ರಾಜ್ಕುಮಾರ್ ಅವರ ಹತ್ತಿರದ ಸಂಬಂಧಿಗಳಾದ ಅವರ ಮನೆಯಲ್ಲಿ ಈಗ ಶೋಕದ ವಾತಾವರಣ ನಿರ್ಮಾಣ ಆಗಿದೆ. ಶಿವರಾಜ್ಕುಮಾರ್ ಅವರು ಹೈದರಾಬಾದ್ನಲ್ಲಿ ‘ಭೈರತಿ ರಣಗಲ್’ ಸಿನಿಮಾದ ಶೂಟಿಂಗ್ನಲ್ಲಿ ಭಾಗಿ ಆಗಿದ್ದರು. ಸ್ಪಂದನಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವಣ್ಣ ಬೆಂಗಳೂರಿಗೆ ವಾಪಸ್ ಹೊರಟಿದ್ದಾರೆ. ವಿಜಯ್ ರಾಘವೇಂದ್ರ ಅವರ ನಿವಾಸಕ್ಕೆ ಎಲ್ಲರೂ ಆಗಮಿಸುತ್ತಿದ್ದಾರೆ.
ಡಾ. ರಾಜ್ಕುಮಾರ್ ಅವರ ಕುಟುಂಬಕ್ಕೆ ಒಂದರ ಹಿಂದೊಂದು ಆಘಾತ ಆಗುತ್ತಿದೆ. ಪುನೀತ್ ರಾಜ್ಕುಮಾರ್ ನಿಧನದಿಂದ ಈ ಕುಟುಂಬಕ್ಕೆ ತೀವ್ರ ನೋವು ಉಂಟಾಗಿತ್ತು. ಬಳಿಕ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ತಂದೆ ರೇವನಾಥ್ ನಿಧನ ಹೊಂದಿದರು. ಕೆಲವೇ ವಾರಗಳ ಹಿಂದೆ ಪಾರ್ವತಮ್ಮ ಅವರ ಸಂಬಂಧಿ, ಯುವ ನಟ ಸೂರಜ್ ಅವರು ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಈಗ ಸ್ಪಂದನಾ ವಿಜಯ್ ರಾಘವೇಂದ್ರ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿರುವುದು ನೋವಿನ ಸಂಗತಿ.
ಸ್ಪಂದನಾ ಅಗಲಿಕೆ ಬಗ್ಗೆ ಶ್ರೀಮರಳಿ ಪ್ರತಿಕ್ರಿಯೆ:
ವಿಜಯ್ ರಾಘವೇಂದ್ರ ಸಹೋದರ ಶ್ರೀಮುರಳಿ ಅವರು ಸ್ಪಂದನಾ ನಿಧನದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಅತ್ತಿಗೆ ನಿಧನರಾದ ಬಗ್ಗೆ ಅಣ್ಣ ರಾಘು ಕರೆ ಮಾಡಿ ತಿಳಿಸಿದರು. ಫ್ಯಾಮಿಲಿ ಜೊತೆ ಅತ್ತಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಅಣ್ಣ ಕೂಡ ಈ ಟ್ರಿಪ್ಗೆ ಅವರ ಜೊತೆ ಸೇರಿಕೊಳ್ಳುವವರಿದ್ದರು. ಅತ್ತಿಗೆ ನಿನ್ನೆ (ಆ.6) ರಾತ್ರಿ ಮಲಗಿದ್ದವರು ಮತ್ತೆ ಏಳಲೇ ಇಲ್ಲ. ಲೋ ಬಿಪಿ ಆಗಿದ್ದರಿಂದ ಅವರಿಗೆ ಈ ರೀತಿ ಆಗಿದೆ ಅಂತ ತಿಳಿದುಬಂದಿದೆ. ನಾಳೆ ಇನ್ನಷ್ಟು ಮಾಹಿತಿ ನೀಡುತ್ತೇವೆ’ ಎಂದಿದ್ದಾರೆ ಮುರಳಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.