ಬೆಂಗಳೂರು, ಜೂನ್ 11: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ಮತ್ತೆ ಮತ್ತೆ ಮುಂದೂಡಿಕೆಯಾಗುತ್ತಲೆ ಇದೆ. ಜೂನ್ 14 ರಂದು ಕಾರ್ಯಕ್ರಮ ಆಯೋಜಿಸಲು ಸರ್ಕಾರದ ಅನುಮತಿ ಕೇಳಲಾಗಿತ್ತು. ಆದರೆ, ಆರಂಭದಲ್ಲಿ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ.
ಬುಧವಾರ ಸಿಎಂ ಯಡಿಯೂರಪ್ಪ ಅವರು ಡಿಕೆಶಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಒಪ್ಪಿಗೆ ನೀಡಿದ ಬೆನ್ನಲ್ಲೆ ಜೂನ್ 14ಕ್ಕೆ ಪದಗ್ರಹಣ ನಡೆಯಲಿದೆ ಎಂಬ ನಿರೀಕ್ಷೆ ಇತ್ತು.
ಆದರೆ, ಕಾರ್ಯಕ್ರಮ ಜೂನ್ 14 ಕ್ಕೆ ಮಾಡಲ್ಲ ಎಂದು ಖುದ್ದು ಡಿಕೆ ಶಿವಕುಮಾರ್ ಹೇಳಿದ್ದಾರೆ. ”ಸಿಎಂ ಯಡಿಯೂರಪ್ಪ ಹೇಳಿಕೆ ಗಮನಿಸಿದ್ದೇನೆ. ಯಡಿಯೂರಪ್ಪ ಹೇಳಿಕೆ ಕೊಟ್ಟ ಬಳಿಕ ಆಸ್ಟ್ರೇಲಿಯಾ ಮತ್ತು ಅಮೇರಿಕಾದಿಂದ ಕರೆ ಮಾಡಿದ್ರು. ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದಾರೆ ಅವರ ಹೇಳಿಕೆ ಅಧಿಕೃತ ಆದೇಶ ಮಾಡಬೇಕು ಅಂತ ಸತ್ವ ಪರೀಕ್ಷೆ ಮಾಡಲ್ಲ. ಕಾರ್ಯಕ್ರಮ ಜೂನ್ 14 ಕ್ಕೆ ಮಾಡಲ್ಲ. ಮುಂದೆ ದಿನಾಂಕ ನಿಗದಿ ಮಾಡುತ್ತೇವೆ.’ ಎಂದು ತಿಳಿಸಿದ್ದಾರೆ.
ನಾನು ಸಿಎಲ್ಪಿ ಲೀಡರ್ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರ ಜತೆ ಚರ್ಚೆ ಮಾಡಬೇಕಿದೆ. ಬಳಿಕ ದಿನಾಂಕ ಘೋಷಣೆ ಮಾಡುತ್ತೇನೆ. ಕಾರ್ಯಕರ್ತರು ಸಿದ್ಧತೆ ಮುಂದುವರೆಸಲಿ. ಇದು ನನ್ನ ಕಾರ್ಯಕ್ರಮ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮ. ಹತ್ತು ಸಾವಿರ ಸ್ಥಳಗಳಲ್ಲಿ ಜನ ಸೇರಿ ಕಾರ್ಯಕ್ರಮ ವೀಕ್ಷಣೆ ಮಾಡ್ತಾರೆ. ಎಲ್ಲದಕ್ಕೂ ವ್ಯವಸ್ಥೆ ಮಾಡಬೇಕಿದೆ” ಎಂದು ತಿಳಿಸಿದ್ದಾರೆ.
‘ಇದರ ನಡುವೆ ಪರಿಷತ್ ಚುನಾವಣೆ ಸಹ ಇದೆ. ಅದಕ್ಕೆ ಅಭ್ಯರ್ಥಿ ಗಳ ನೇಮಕ ಮಾಡಬೇಕಿದೆ. ಬಹಳ ಜವಾಬ್ದಾರಿ ಇದೆ. ಇದೆಲ್ಲದರ ಜತೆಗೆ ಕಾರ್ಯಕ್ರಮ ದಿನಾಂಕ ನಿಗದಿ ಮಾಡ್ತೀವಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.