ಕೋಬ್ರಾ ಕಮಾಂಡೋ ಬಂಧನ; ಯೋಧನನ್ನು ಕಳ್ಳನಂತೆ ನಡೆಸಿಕೊಂಡ ಪೊಲೀಸರ ವಿರುದ್ಧ ಜನಾಕ್ರೋಶ
ಚಿಕ್ಕೋಡಿ(ಏ. 27): ಸದಲಗ ಪೊಲೀಸ್ ಠಾಣೆಯಲ್ಲಿ ಸಿಆರ್‌ಪಿಎಫ್ ಕೋಬ್ರಾ ಕಮಾಂಡೋ ಯೋಧನಿಗೆ ಚೈನ್ ಹಾಕಿ ಕೂರಿಸಿದ್ದ ಪೊಲೀಸರ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಿಆರ್‌ಪಿಎಫ್ ಕೋಬ್ರಾ ಬೆಟಾಲಿಯನ್ ಕಾನ್ಸ್‌ಟೇಬಲ್ ಆಗಿರುವ ಯೋಧ ಸಚಿನ್ ಸಾವಂತ್ ವಿರುದ್ಧ ಐಪಿಸಿ 353, 323, 504 ಅಡಿ ಪ್ರಕರಣ ದಾಖಲಿಸಿರುವ ಕಾರಣ ಯೋಧನಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಪೊಲೀಸರ ಕ್ರಮಕ್ಕೆ ಸಿಆರ್‌ಪಿಎಫ್ ಕೋಬ್ರಾ ಬೆಟಾಲಿಯನ್ ಅಸಿಸ್ಟೆಂಟ್ ಕಮಾಂಡಂಟ್ ಶ್ಯಾಮ್ ಸುಂದರ್ ಅವರು ಕರ್ನಾಟಕ ಡಿಜಿಪಿಗೆ ಟ್ವೀಟ್ ಹಾಗೂ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ನಂತರ ಎಫ್ಐಆರ್ ದಾಖಲಿಸುವ ಮುನ್ನ ನಮ್ಮ ಗಮನಕ್ಕೂ ತರಬೇಕಿತ್ತು. ಪೊಲೀಸರು ಲಾಠಿಯಿಂದ ಹೊಡೆಯುವಾಗ ಆತ್ಮರಕ್ಷಣೆಗೆ ಪ್ರತಿ ದಾಳಿ ಮಾಡಿದ್ದಾನೆ. ಆದರೆ, ಪೊಲೀಸರು ಯೋಧ ಅಂತ ತಿಳಿದ ಮೇಲೂ ಠಾಣೆಯಲ್ಲಿ ಕೈಗೆ ಚೈನ್ ಹಾಕಿ ಕೂರಿಸಿದ್ದು ಸರಿಯಲ್ಲ ಎಂದು ಅಸಿಸ್ಟೆಂಟ್ ಕಾಮಾಂಡಂಟ್ ಶ್ಯಾಮ್ ಸುಂದರ್ ತಿಳಿಸಿದ್ದಾರೆ.
ಮಾರ್ಚ್ 23 ರಂದು ಯೋಧ ಸಚಿನ್ ಯಕ್ಸಂಬಾ ಗ್ರಾಮದ ತಮ್ಮ ಮನೆಯ ಮುಂದೆ ಮಾಸ್ಕ್ ಧರಿಸದೆ ಬೈಕ್ ತೊಳೆಯುತ್ತಿದ್ದರು. ಇದೇ ವೇಳೆ ಪೊಲೀಸರು ಅಲ್ಲಿಗೆ ಬಂದಾಗ ಮಾಸ್ಕ ಧರಿಸಿಬೇಕು ಹೊರಗಡೆ ಬರಬಾರದು ಒಳಗೆ ಹೋಗಿ ಎಂದು ಯೋಧರಿಗೆ ಹೇಳುತ್ತಾರೆ. ಈ ಸಂದರ್ಬದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಯೋಧನಿಗೆ ಹೊಡೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಸಚಿನ್ ಕೂಡ ಕೈ ಎತ್ತುತ್ತಾರೆ. ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದ ಕಾರಣವೊಡ್ಡಿ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸುತ್ತಾರೆ.