ಲಾಕ್‌ಡೌನ್‌ನಲ್ಲಿ ಎಣ್ಣೆ ಕುಡಿಯೋಕೆ ಹೊಸ ಹೊಸ ಐಡಿಯಾ; ಮೈಸೂರಿನಲ್ಲಿ ಮದ್ಯಪ್ರಿಯರು ಸಿಕ್ಕಿಬಿದ್ದಿದ್ದೇಗೆ ಗೊತ್ತಾ?
ಮೈಸೂರು(ಏ.12): ಈ ಲಾಕ್‌ಡೌನ್ ಮುಗಿಯೋದು ಯಾವಾಗ? ನಮಗೆ ಎಣ್ಣೆ ಸಿಗೋದು ಯಾವಾಗ? ಈ ಮಾತು ಸದ್ಯ ದೇಶ್ಯಾದ್ಯಂತ ಮದ್ಯಪ್ರಿಯರ ಬಾಯಲ್ಲಿ ಕೇಳಿ ಬರುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಮೂರೇ ಮೂರು ಪೆಗ್ ಇರಲಿ, ಒಂದು ಪೆಗ್ ಸಿಕ್ಕಿದರೂ ಅಮೃತ ಸಿಕ್ಕಂತಾಗುತ್ತದೆ. ಆದರೆ ಎಲ್ಲಿಯೂ ಎಣ್ಣೆ ಸಿಗುತ್ತಿಲ್ಲ. ಇಷ್ಟೆಲ್ಲಾ ನಿರ್ಬಂಧದ ನಡುವೆ ಮೈಸೂರಿನಲ್ಲಿ ಮದ್ಯಪ್ರಿಯರು ಎಣ್ಣೆ ಸಾಗಾಟ ಹಾಗೂ ಮಾರಾಟಕ್ಕೆ ಹೊಸ ಹೊಸ ಐಡಿಯಾ ಹುಡುಕಿದ್ದಾರೆ. ಅಲ್ಲದೇ ಮದ್ಯಪ್ರಿಯರನ್ನು ವಂಚಿಸುವ ಪ್ರಯತ್ನಗಳು ಆಗಿದ್ದು ಮೈಸೂರಿನಲ್ಲಿ ಸದ್ಯ ಎಣ್ಣೆಯದ್ದೇ ಸದ್ದು ಕೇಳಿ ಬಂದಿದೆ.
ಹೌದು, ಮೈಸೂರಿನಲ್ಲಿ ಮದ್ಯ ಮಾರಾಟಕ್ಕೆ ಹೊಸ ಹೊಸ ಐಡಿಯಾಗಳನ್ನ ಬಳಸುತ್ತಿರುವ ಮದ್ಯಪ್ರಿಯರು ಲಾಕ್‌ಡೌನ್ ನಡುವೆ ಅಕ್ರಮವಾಗಿ ಮದ್ಯಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಮೈಸೂರಿನಲ್ಲಿ ಚಾಲಾಕಿ ಅಕ್ರಮ ಮದ್ಯ ಮಾರಾಟಗಾರರನ್ನ ಬಂಧಿಸಿದ ಅಬಕಾರಿ ಸಿಬ್ಬಂದಿಗಳು ವಾಟ್ಸಪ್ ಗ್ರೂಪ್ ಹಾಗೂ ವ್ಯಾಟ್ಸಪ್ ಸ್ಟೇಟಸ್ ಹಾಕಿ ಮದ್ಯ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿಗಳನ್ನ ಸೆರೆಹಿಡಿದಿದ್ದಾರೆ.
ಮೈಸೂರಿನ ಗಾಯಿತ್ರಿಪುರಂ ಬಡಾವಣೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಮನೆಯಲ್ಲಿ ಶೇಖರಿಸಿ ಇಟ್ಟಿದ್ದ ಮದ್ಯ ವಶ ಪಡಿಸಿಕೊಂಡಿದ್ದಾರೆ. ಈ ಚಾಲಾಕಿಗಳು ವ್ಯಾಟ್ಸಪ್ ಸ್ಟೇಟಸ್ ಹಾಕಿ ಗೆಳೆಯರಿಗೆ ಮದ್ಯಮಾರಾಟ ಮಾಡುತ್ತಿದ್ದರು. ಗಾಯಿತ್ರಿಪುರಂನ ಮೀನು ಮಾರಾಟ ಕೇಂದ್ರದ ಬಳಿ ನಿಂತು ಮದ್ಯ ಇರುವ ಬಗ್ಗೆ ಓರ್ವ ವ್ಯಕ್ತಿ ಮಾಹಿತಿ ನೀಡುತ್ತಿದ್ದ. ಎಣ್ಣೆ ಬೇಕು ಅಂದವರನ್ನು ಮತ್ತೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ರವಾನೆ ಮಾಡುತ್ತಿದ್ದ. ಎಲ್ಲಾ ವ್ಯವಹಾರವು ವ್ಯಾಟ್ಸಪ್‌ನಲ್ಲೇ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸಿದ್ದಾರೆ. ಬಂಧಿತ ಸುಭಾಷ್, ಶಂಕರಯ್ಯರಿಂದ ಮನೆಯಲ್ಲಿ ಶೇಖರಿಸಿಟ್ಟಿದ್ದ 13.5 ಲೀಟರ್ ಮದ್ಯ ವಶ ಪಡಿಸಿಕೊಳ್ಳಲಾಗಿದೆ, ಇದರ ಅಂದಾಜು ಬೆಲೆ 66.720 ರೂ ಅಂತ ಮಾಹಿತಿ ಸಿಕ್ಕಿದೆ.
ಮತ್ತೊಂದು ಪ್ರಕರಣದಲ್ಲಿ ನಾದಸ್ವರದ ಡೋಲಿನಲ್ಲಿ ಮದ್ಯದ ಪಾಕೆಟ್‌ಗಳನ್ನ ತುಂಬಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನ ಬಂಧಿಸಲಾಗಿದೆ. ಲಾಕ್‌ಡೌನ್‌ಗೆ ಸೆಡ್ಡು ಹೊಡೆದು ಅಕ್ರಮವಾಗಿ ಮದ್ಯ ಸಾಗಾಟಕ್ಕೆ ಯತ್ನಿಸಿದ ಈ ಚಾಲಾಕಿಗಳು ಅರಣ್ಯಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಉದ್ಬೂರು ಚಕ್‌ಪೋಸ್ಟ್‌ನಲ್ಲಿ 20 ದಿನಗಳಿಂದಲೂ ನಿರಂತರವಾಗಿ ಅಕ್ರಮ ಮದ್ಯ ಸರಬರಾಜು ಆಗುತ್ತಿರುವ ಆರೋಪ ಕೇಳಿಬಂದಿತ್ತು. ಆದ್ರೆ ಯಾವುದೇ ವಾಹನಗಳಲ್ಲಿ ಮದ್ಯ ಸಾಗಟವಾಗಿಲ್ಲ. ಈ ಬಗ್ಗೆ ತಲೆ ಕೆಡಿಸಿಕೊಂಡು ಇಂದು ಬೆಳಗ್ಗೆ ಹೆಚ್.ಡಿ.ಕೋಟೆ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಉದ್ಬೂರು ಅರಣ್ಯದ ಚೆಕ್‌ಪೋಸ್ಟ್ ಬಳಿ ನಾದಸ್ವಾರ ನುಡಿಸುವ ಡೋಲು ವಾದಕರನ್ನ ತಪಾಸಣೆಗೆ ಒಳಪಡಿಸಿದಾಗ ಡೋಲಿನ ಒಳಗೆ ಮದ್ಯದ ಪ್ಯಾಕೇಟ್‌ಗಳು ಸಿಕ್ಕಿವೆ. ದೇವಸ್ಥಾನದಲ್ಲಿ ಡೋಲು ಹೊಡೆಯುವ ನೆಪದಲ್ಲಿ ಕಿಲಾಡಿ ಪ್ಲಾನ್ ಮಾಡಿಕೊಂಡು ನಿತ್ಯ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನ ವಶಕ್ಕೆ ಪಡೆದು, ಡೋಲಿನ ಒಳಗೆ ಇದ್ದ ಎರಡು ಕೇಸ್ ಮದ್ಯವನ್ನ ಸೀಜ್ ಮಾಡಿದ್ದಾರೆ. ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಇಬ್ಬರ ಮೇಲೂ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ನಡುವೆ ಎಣ್ಣೆ ಪ್ರಿಯರ ಆಸೆಯನ್ನೇ ಬಂಡವಾಳ ಮಾಡಿಕೊಂಡ ಕೆಲವರು ಎಣ್ಣೆ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ದೋಖಾ ಮಾಡ್ತಿದ್ದಾರೆ. 24 ಗಂಟೆಗಳ ಕಾಲ ಮದ್ಯ ಸಿಗುತ್ತೆ ಅಂತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದು, ಫೇಸ್‌ಬುಕ್‌ನಲ್ಲಿ ಮದ್ಯದಂಗಡಿಯ ಅಡ್ರೆಸ್ ಹಾಗೂ ಮೊಬೈಲ್ ನಂಬರ್ ಬರೆದು ಪೋಸ್ಟ್ ಹಾಕಿರುವ ಕಿಡಿಗೇಡಿಗಳು, ಕರೆ ಮಾಡಿದವರಿಗೆ ಆನ್‌ಲೈನ್ ಮೂಲಕ ಹಣ ಹಾಕಿಸಿಕೊಂಡು ದೋಖಾ ಮಾಡ್ತಿದ್ದಾರೆ.
ಮೈಸೂರಿನ ಟ್ರೂ ಸ್ಪಿರಿಟ್ ಮದ್ಯದಂಗಡಿ ಹೆಸರಿನಲ್ಲಿ ಪೋಸ್ಟ್ ಹಾಕಿದ್ದು, ಎಂಆರ್‌ಪಿ ದರದಲ್ಲೇ ಮದ್ಯ ಮನೆ ಬಾಗಿಲಿಗೆ ಸಿಗುತ್ತೆ ಅಂತ ಬರೆದಿರುವ ಪೋಸ್ಟ್ ನಂಬಿ ಕೆಲವರು ಹಣಹಾಕಿದರೆ, ಇನ್ನು ಕೆಲವರು ಎಚ್ವೆತ್ತುಕೊಂಡು ದೂರು ನೀಡಿದ್ದಾರೆ. ಲಾಕ್‌ಡೌನ್ ಸಂದರ್ಭಗಳನ್ನು ಹೀಗೆಲ್ಲಾ ದುರುಪಯೋಗ ಪಡಿಸಿಕೊಂಡಿರುವ ಕಿಲಾಡಿಗಳು, ಎಣ್ಣೆ ಸಿಗದೆ ಖಾಲಿ ಕುಳಿತಿರುವ ಮದ್ಯಪ್ರಿಯರನ್ನು ಬಿಡದೆ ಕಾಡುತ್ತಿದ್ದಾರೆ. ಒಟ್ಟಿನಲ್ಲಿ ಇಂದು ಮೈಸೂರಿನಲ್ಲಿ ಎಣ್ಣೆಯ ಸದ್ದು ಜೋರಾಗಿಯೇ ಕೇಳಿದ್ದು ಎಣ್ಣೆ ಹೊಡೆಯೋಕೆ ಹುಡುಕಿಕೊಂಡ ಹೊಸ ಐಡಿಯಾಗಳು ಗಮನ ಸೆಳೆದಿವೆ.