EBM News Kannada
Leading News Portal in Kannada

ಲಾಕ್ ಡೌನ್ ಮುರಿದವರಿಗೆ ಲಾಠಿ – ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಕ್ಕಿ ವಿತರಿಸಿದ ಮುಖ್ಯ ಶಿಕ್ಷಕ ಅಮಾನತು

0

ಕಲಬುರ್ಗಿ(ಏ.10): ಕೊರೋನಾ ಸೋಂಕು ಹೆಚ್ಚಳಗೊಳ್ಳುತ್ತಿದ್ದರೂ ಕಲಬುರ್ಗಿಯಲ್ಲಿ ಲಾಕ್ ಡೌನ್​ಗೆ ಜನರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಲಾಕ್ ಡೌನ್ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿದೆ. ಬೇಕಾಬಿಟ್ಟಿ ಅಡ್ಡಾಡುವವರಿಗೆ ಲಾಠಿ ರುಚಿ ತೋರಿಸಿದೆ. ಏಕಕಾಲಕ್ಕೆ ವಿವಿಧ ಠಾಣೆಗಳ ಇನ್ಸ್​ಪೆಕ್ಟರ್​​ಗಳು ನಗರ ಪ್ರದಕ್ಷಿಣೆ ಮಾಡಿ, ಎದುರಿಗೆ ಸಿಕ್ಕ ಬೈಕ್ ಸವಾರರಿಗೆ ಲಾಠಿ ರುಚಿ ತೋರಿಸಿದ್ದಾರೆ. ಕಲಬುರ್ಗಿ ಉತ್ತರ ಕ್ಷೇತ್ರದ ಕಡೆ ಪೊಲೀಸರು ಗಮನ ಕೇಂದ್ರೀಕರಿಸಿದ್ದಾರೆ.

ಶುಕ್ರವಾರವಾಗಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಬಂದವರಿಗೆ, ಬೈಕ್ ಮೇಲೆ ಬೇಕಾಬಿಟ್ಟಿ ಅಡ್ಡಾಡುತ್ತಿದ್ದರನ್ನು ಲಾಠಿಯಿಂದ ಹೊಡೆದು ಎಚ್ಚರಿಕೆ ನೀಡಿದ್ದಾರೆ. ಲಾಕ್ ಡೌನ್ ಕಟ್ಟುನಿಟ್ಟಿನ ಜಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದ ಬೆನ್ನ ಹಿಂದೆಯೇ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ.

ಲಾಕ್ ಡೌನ್ ಉಲ್ಲಂಘನೆ ಮಾಡಿದ ಹಲವರನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ. ನಗರದ ರೋಜಾ ಪ್ರದೇಶದಲ್ಲಿ ಸಂಚರಿಸಿದ ಪೊಲೀಸರು, ಅಂಗಡಿ ಮತ್ತು ಹೋಟೆಲ್ ಗಳನ್ನು ತೆರೆದಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬೇಕಾಬಿಟ್ಟಿ ಅಡ್ಧಾಡುತ್ತಿದ್ದವರನ್ನೂ ಬಂಧಿಸಿದ್ದಾರೆ.

ಲಾಕ್ ಡೌನ್ ನಡುವೆಯೂ ಹೋಟೆಲ್ ತೆಗೆದವರನ್ನು ಬಂಧಿಸಿದ್ದಾರೆ. ರೋಜಾ ಪ್ರದೇಶದಲ್ಲಿ ಒಟ್ಟು ಒಂಬತ್ತು ಜನರ ಬಂಧಿಸಲಾಗಿದೆ. ಬಂಧಿತರನ್ನು ರುಕ್ಮೋದ್ದೀನ್, ಸತ್ತಾರ್ ಬಾಬುಮಿಯ್ಯಾ, ಶೇಖ್ ರಹೀಂ, ಜಾಹೀದ್ ಹಮೀದ್, ಮಹ್ಮದ್ ಸಲೀಂ, ಶಫೀ ಅಬ್ದುಲ್ ಮಿಯ್ಯಾ, ಮಹ್ಮದ್ ಅಯೂಬ್, ಜಿಸ್ಯಾನ್, ಯೂನಸ್ ನೂರ್ ಪಾಷಾ ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಕ್ಕಿ ವಿತರಣೆ ಅವಾಂತರಕ್ಕೆ ಮುಖ್ಯ ಶಿಕ್ಷಕ ಅಮಾನತು :

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಕ್ಕಿ ವಿತರಣೆ ಮಾಡಿದ ಆರೋಪದ ಮೇಲೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕನನ್ನು ಅಮಾನಲು ಮಾಡಲಾಗಿದೆ. ಅಪ್ಪಣ್ಣ ಕುಲಕರ್ಣಿ ಅಮಾನತ್ತಾದ ಮುಖ್ಯ ಶಿಕ್ಷಕ. ಮಧ್ಯಾಹ್ನದ ಬಿಸಿಯೂಟ ಬದಲು ಆಹಾರ ಧಾನ್ಯ ವಿತರಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಸರ್ಕಾರದ ನಿರ್ದೇಶನದಂತೆ ಅಕ್ಕಿ ವಿತರಿಸಲು ಮುಂದಾಗಿದ್ದ ಮುಖ್ಯ ಶಿಕ್ಷಕ, ಶಾಲೆಯ 800 ಮಕ್ಕಳಿಗೆ ಏಕ ಕಾಲಕ್ಕೆ ಬರುವಂತೆ ಸೂಚಿಸಿದ್ದೇ ಅವಾಂತರಕ್ಕೆ ಕಾರಣವಾಗಿತ್ತು.ಮಕ್ಕಳು, ಪೋಷಕರು ಸೇರಿ ಸಾವಿರಕ್ಕಿಂತ ಅಧಿಕ‌ ಜನ ಅಕ್ಕಿ ತೆಗೆದುಕೊಳ್ಳಲೆಂದು ಶಾಲೆಯ ಆವರಣದಲ್ಲಿ ಜಮಾಯಿಸಿದ್ದರು. ಅಕ್ಕಿಗಾಗಿ ನೂಕು ನುಗ್ಗಲು ಏರ್ಪಟ್ಟು, ಸಾಮಾಜಿಕ ಅಂತರವೇ ಇಲ್ಲದಂತಾಗಿತ್ತು. ಜನಜಂಗುಳಿಯಿಂದ ಗೊಂದಲ ನಿರ್ಮಾಣವಾಗಿತ್ತು. ಯಾವುದೇ ಮುಂಜಾಗ್ರತೆ ಕೈಗೊಳ್ಳದೇ ಅಕ್ಕಿ ವಿತರಣೆಗೆ ಮುಂದಾಗಿದ್ದುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.