ಬೆಂಗಳೂರು: ಸುಲಿಗೆಕೋರರಿಗೆ ಪ್ರತಿರೋಧ ಒಡ್ಡಿದ್ದಕ್ಕೆ ಡ್ಯಾನ್ಸ್ ಮಾಸ್ಟರ್ ಇರಿದು ಹತ್ಯೆ!
ಬೆಂಗಳೂರು; ಸುಲಿಗೆಕೋರರಿಗೆ ಪ್ರತಿರೋಧ ವ್ಯಕ್ತಪಡಿಸಿದ್ದ ಡ್ಯಾನ್ಸ್ ಮಾಸ್ಟರ್ ಒಬ್ಬರನ್ನು ಹತ್ಯೆ ಮಾಡಿರುವ ದಾರುಣ ಘಟನೆ ಆರ್’ಎಸ್’ಸಿ ಯಾರ್ಡ್ ಸಮೀಪ ಶನಿವಾರ ತಡರಾತ್ರಿ ನಡೆದಿದೆ.
ಹಾಸನ ಮೂಲದ ಪ್ರೇಮ್ ಗೌತಮ್ (30) ಮೃತ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ. ಪ್ರೇಮ್ ಗೌತಮ್’ಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಎರಡು ಮರ್ಷದ ಪುತ್ರಿ ಇದ್ದಾಳೆ. ನೃತ್ಯ ಶಿಕ್ಷಕರಾಗಿರುವ ಪ್ರೇಮ್ ಹಾಸನ ಪುರಸಭೆಯಲ್ಲಿ ಗುತ್ತಿಗೆ ನೌಕರರಾಗಿ ಕೂಡ ಕೆಲಸ ಮಾಡುತ್ತಿದ್ದರು.
ಪರಿಚಯಸ್ಥ ಶಿವು ಎಂಬುವವರು ಬೇತಾಳ ಕಿರುಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಸ್ನೇಹಿತ ರಘು ಶನಿವಾರ ಸಂಜೆ ಪ್ರೇಮ್’ಗೆ ಕರೆ ಮಾಡಿ ಭಾನುವಾರ ಚಿತ್ರೀಕರಣವಿದ್ದು, ಗೊರಗುಂಟೆ ಪಾಳ್ಯದಲ್ಲಿರುವ ಭೂಮಿಕಾ ಸ್ಟುಡಿಯೋಗೆ ಬರುವಂತೆ ತಿಳಿಸಿದ್ದಾರೆ.
ಸ್ಟುಡಿಯೋದಲ್ಲಿಯೇ ಸ್ನೇಹಿತರು ಕೂಡ ಇರುತ್ತಿದ್ದರು. ಶನಿವಾರ ಸಂಜೆಯೇ ಹಾಸನದಿಂದ ಹೊರಟಿದ್ದ ಪ್ರೇಮ್ ರಾತ್ರಿ 12ರ ಸುಮಾರಿಗೆ ಗೊರಗುಂಡೆ ಪಾಳ್ಯದ ಸಮೀಪ ಬಸ್ ಇಳಿದಿದ್ದರು.
ಗೊರಗುಂಟೆ ಪಾಳ್ಯದ ಔಟ್ ಪೋಸ್ಟ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ 3-4 ಮಂದಿ ಸುಲಿಗೆಕೋರರ ತಂಡ ಪ್ರೇಮ್ ಅವರನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಯತ್ನ ನಡೆಸಿದ್ದಾರೆ. ಈ ವೇಳೆ ಪ್ರೇಮ್ ದುಷ್ಕರ್ಮಿಗಳಿಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಬಳಿಕ ದುಷ್ಕರ್ಮಿಗಳು ಪ್ರೇಮ್ ಅವರ ಮುಖಕ್ಕೆ ಗುದ್ದಿ, ತೊಡೆ ಭಾಗಕ್ಕೆ 2-3 ಬಾರಿ ಇರಿದು ಅವರ ಬಳಿಯಿದ್ದ ಮೊಬೈಲ್ ಕಸಿದು ಸ್ಥಳದಿಂದ ಪರಾರಿಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಇರಿತಕ್ಕೊಳಗಾಗಿದ್ದ ಪ್ರೇಮ್ ಅವರು ನಿಧಾನವಾಗಿಯೇ ನೋವಿನಲ್ಲೇ ಅರ್ಧ ಕಿ.ಮೀ ದೂರದಲ್ಲಿರುವ ಭೂಮಿಕಾ ಸ್ಟುಡಿಯೋ ಬಳಿ ಹೋಗಿ ಕುಸಿದು ಬಿದ್ದಿದ್ದಾರೆ. ಇತ್ತ ಸ್ನೇಹಿತ ಬರಲಿಲ್ಲ ಎಂದು ರಫು, ಪ್ರೇಮ್ ಮೊಬೈಲ್’ಗೆ ಸಂಪರ್ಕಿಸಿ ಸುಮ್ಮನಾಗಿದ್ದರು.
ವ್ಯಕ್ತಿಯೊಬ್ಬರು ಸ್ಟುಡಿಯೋ ಬಳಿ ಮೃತಪಟ್ಟಿರುವ ಭಾನುವಾರ ಬೆಳಗಿನ ಜಾವ ದಾರಿ ಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿ ಪರಿಶೀನೆ ನಡೆಸುವಷ್ಟರಲ್ಲಿ ಪ್ರೇಮ್ ಅವರು ಮೃತಪಟ್ಟಿದ್ದರು. ಆ ಬಳಿಕವಷ್ಟೇ ಸ್ನೇಹಿತರಿಗೆ ಪೊಲೀಸರು ವಿಷಯ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಸ್ಥಳೀಯ ಸಿಸಿಟಿವಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶೀಘ್ರಗತಿಯಲ್ಲಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ಮೇಲ್ನೋಟಕ್ಕೆ ಸುಲಿಗೆ ಮಾಡಲು ಬಂದವರೇ ಕೃತ್ಯವೆಸಗಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.