ತುಮಕೂರು: ನ್ಯಾಯಾಲಯ ಕಟ್ಟಡದಿಂದ ಜಿಗಿದು ಖೈದಿ ಆತ್ಮಹತ್ಯೆ
ತುಮಕೂರು: ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಖೈದಿಯೊಬ್ಬ ಕೋರ್ಟ್ ಕಟ್ಟಡದ 3ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಖೈದಿಯನ್ನು ಚಂದ್ರಯ್ಯ (29) ಎಂದು ಗುರುತಿಸಲಾಗಿದ್ದು ಗುಬ್ಬಿ ತಾಲ್ಲೂಕಿನ, ಚೇಳೂರು ಹೋಬಳಿಯ ನಾಗಲಾಪುರ ಗ್ರಾಮದವನಾಗಿದ್ದಾನೆ.
ಕಟ್ಟಡದಿಂಡ ಜಿಗಿದ ಖೈದಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಅವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬದುಕುಳಿಯಲಿಲ್ಲ.
ಚೇಳೂರು ಪೋಲೀಸ್ ಠಾಣೆಯಲ್ಲಿ ಚಂದ್ರಪ್ಪನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. 2017ರಲ್ಲಿ 6 ವರ್ಷದ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಹೇಳಿದ್ದಾರೆ.
ಇದೇ ಪ್ರಕರಣದ ವಿಚಾರಣೆ ಶನಿವಾರ ತುಮಕೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಅಲು ಕರೆತರಲಾಗಿತ್ತು. ನ್ಯಾಯಾಧೀಶರು ವಿಚಾರಣೆ ದಿನಾಂಕ ಮುಂದೂಡಿ ತೀರ್ಪು ನೀಡಿದ ಬಳಿಕ ಕೊಠಡಿಯಿಂದ ಹೊರ ಬಂದ ಖೈದಿ ಚಂದ್ರಯ್ಯ ಕೋರ್ಟ್ ಆವರಣದಿಂದ ಕೆಳಕ್ಕೆ ಜಿಗಿದಿದ್ದನು.