ಬಿಬಿಎಂಪಿ ಮಾಜಿ ಸದಸ್ಯ ದೊಡ್ಡಣ್ಣ ಪುತ್ರ ಗೌತಮ್ ಆತ್ಮಹತ್ಯೆ: ಕಂಟ್ರಾಕ್ಟರ್ ಆಗಿದ್ದರೇ? – Kannada News | Bengaluru News: Former BBMP member Doddanna’s son Gautam commits suicide: Was he a contractor?
Bengaluru News: ಬೆಂಗಳೂರಿನ ಅತ್ತಿಗುಪ್ಪೆ ನಿವಾಸದಲ್ಲಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ದೊಡ್ಡಯ್ಯ ಪುತ್ರ ಗೌತಮ್(29) ನೇಣಿಗೆ ಶರಣಾಗಿರುವಂತಹ ಘಟನೆ ಗುರುವಾರ ನಡೆದಿದೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ತಂದೆ ದೊಡ್ಡಯ್ಯ, ನನ್ನ ಮಗ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದ ಎನ್ನುವುದು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಮೃತ ಗೌತಮ್
ಬೆಂಗಳೂರು, ಆಗಸ್ಟ್ 10: ಬಿಬಿಎಂಪಿ (BBMP) ಮಾಜಿ ಸದಸ್ಯ ಪುತ್ರ ಗೌತಮ್(29) ಆತ್ಮಹತ್ಯೆ ವಿಚಾರವಾಗಿ ಕೆಲ ಊಹಾಪೋಹಗಳು ಕೇಳಿಬಂದಿದ್ದು, ಈ ಕುರಿತಾಗಿ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಗೌತಮ್ ತಂದೆ ದೊಡ್ಡಯ್ಯ, ನನ್ನ ಮಗ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದ ಎನ್ನುವುದು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆತ ಯಾವುದೇ ಕಂಟ್ರಾಕ್ಟರ್ ಕೆಲಸ ಮಾಡುತ್ತಿರಲಿಲ್ಲ. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನಮಗೂ ಗೊತ್ತಾಗುತ್ತಿಲ್ಲಎಂದು ಹೇಳಿದ್ದಾರೆ.
ಕೊನೆ ಮಗನೆಂದು ಗೌತಮ್ನನ್ನು ತುಂಬಾ ಮುದ್ದಾಗಿ ಸಾಕಿದ್ದೆವು. ಹುಡುಗರ ಜೊತೆ ಓಡಾಡಿಕೊಂಡಿದ್ದ. ಆತನಿಗೆ ಮದುವೆ ಮಾಡಲು ಹೆಣ್ಣು ನೋಡುತ್ತಿದ್ದೆವು. ಕಳೆದ 3-4 ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದಿದ್ದಾರೆ.
ಕಂಟ್ರಾಕ್ಟರ್ ಅಲ್ಲ, ಆತ ಗುತ್ತಿಗೆದಾರನೂ ಅಲ್ಲ: ಗೌತಮ್ ಭಾವ
ಮೃತ ಗೌತಮ್ ಭಾವ ಹೇಳಿಕೆ ನೀಡಿದ್ದು, ನನ್ನ ಭಾಮೈದ ಕಂಟ್ರಾಕ್ಟರ್ ಅಲ್ಲ, ಆತ ಗುತ್ತಿಗೆದಾರನಲ್ಲ. ಇದು ಬಿಜೆಪಿಯವರು ಮಾಡಿರುವ ಕೆಲಸ. ಮದುವೆ ಮಾಡಲು ನಿರ್ಧರಿಸಿ ಹುಡುಗಿ ಹುಡುಕುತಿದ್ದೇವು. ಈ ವೇಳೆ ಡಿಪ್ರೇಷನ್ನಲ್ಲಿ ಆತ ಮೃತಪಟ್ಟಿದ್ದಾನೆ. ಆತ ಯಾವ ಕಂಟ್ರಾಕ್ಟರ್ ಅಲ್ಲ, ಆತನಿಗೆ ಬಿಲ್ ಬರಬೇಕಾಗಿರಲಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ
ಅಧಿಕಾರಕ್ಕೆ ಬಂದ ದಿನದಿಂದ ಕಲೆಕ್ಷನ್, ಕಮಿಷನ್ ಎನ್ನುತ್ತಾ ಲೂಟಿಗಿಳಿದ ಪರಿಣಾಮವೇ ಇಂದು ಬಿಬಿಎಂಪಿ ಗುತ್ತಿಗೆದಾರ ಗೌತಮ್ ಕಾಮಗಾರಿ ಬಿಲ್ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಆರೋಪಿಸಿದೆ.
ಉತ್ತರ ಕೊಡಲ್ಲ, ಆಣೆ ಮಾಡೋಲ್ಲ, ಪ್ರತಿಭಟನೆ ಮಾಡಿದ್ರೆ ಬ್ಲ್ಯಾಕ್ ಮೇಲ್ ಎನ್ನುತ್ತ ಬೇಜವಾಬ್ದಾರಿಯಿಂದ ವರ್ತಿಸಿದ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ಧರಾಮಯ್ಯ ಅವರೇ ಇದಕ್ಕೆ ನೇರ ಹೊಣೆ!
ಆಡಳಿತ ನಡೆಸಲು ಕಾಂಗ್ರೆಸ್ ಅಸಮರ್ಥ ಎನ್ನುವುದು ಸಾಬೀತಾಗಿದೆ. ಇನ್ನಷ್ಟು ಜೀವಗಳನ್ನು ಬಲಿ ಪಡೆಯುವ ಮೊದಲು ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ವಾಗ್ದಾಳಿ ಮಾಡಲಾಗಿದೆ.
ಘಟನೆ ಹಿನ್ನೆಲೆ
ಬೆಂಗಳೂರಿನ ಅತ್ತಿಗುಪ್ಪೆ ನಿವಾಸದಲ್ಲಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪುತ್ರ ಗೌತಮ್(29) ನೇಣಿಗೆ ಶರಣಾಗಿರುವಂತಹ ಘಟನೆ ಗುರುವಾರ ನಡೆದಿದೆ. ಮೃತ ಗೌತಮ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಗುತ್ತಿಗೆ ಕೆಲಸ ಮಾಡಿಸಿದ್ದ. ಪೋಷಕರು ದೂರು ನೀಡಿದ ನಂತರ ಆತ್ಮಹತ್ಯೆಗೆ ಕಾರಣ ತಿಳಿಯಲಿದೆ. ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On – 5:03 pm, Thu, 10 August 23